ಪಕ್ಷ, ಧರ್ಮಗಳನ್ನು ಬದಿಗಿಟ್ಟು ಕೊರೋನ ವಿರುದ್ಧ ಹೋರಾಡೋಣ: ಡಿ.ಕೆ.ಶಿವಕುಮಾರ್

Update: 2020-04-06 17:54 GMT

ಬೆಂಗಳೂರು, ಎ.6: ಕೊರೋನ ಸೋಂಕು ಮಾನವ ಸಂಕುಲಕ್ಕೆ ಅಪಾಯ ತಂದೊಡ್ಡಿದ್ದು, ನಾವೆಲ್ಲರೂ ಪಕ್ಷ, ಧರ್ಮಗಳ ವ್ಯತ್ಯಾಸ ಬದಿಗಿಟ್ಟು ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ವಿಚಾರದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ವಿಎಚ್‍ಪಿ, ಆರೆಸ್ಸೆಸ್ ಸೇರಿದಂತೆ ಇತರೆ ಸಂಘಟನೆಗಳು ರಾಜಕೀಯ ಹೇಳಿಕೆ ನೀಡುತ್ತಿವೆ. ತಪ್ಪು ಮಾಹಿತಿಗಳನ್ನು ಹರಿಬಿಟ್ಟು ಅಭಿಯಾನ ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದನ್ನು ಬಿಟ್ಟು ಪಕ್ಷ, ಧರ್ಮ ಬಿಟ್ಟು ಮಾನವ ಸೇವೆಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಜಿ ಆರೋಗ್ಯ ಸಚಿವ ರಮೇಶ್‍ ಕುಮಾರ್ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿದ್ದೇವೆ. ಅವರು ವಿವಿಧ ವಿಭಾಗಗಳನ್ನು ಮಾಡಿಕೊಂಡು ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಈಗ ಶಾಸಕ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ವಾರ್ ರೂಮ್‍ನ್ನು ಆರಂಭಿಸಿದ್ದೇವೆ. ಅವರು ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾರ್ ರೂಮ್ ರಚನೆ ಮಾಡಿಸಿ ಜನರಿಂದ ಸಮಸ್ಯೆ ಹಾಗೂ ಅವರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ನಂತರ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆಂದು ಅವರು ವಿವರಿಸಿದರು.

ರಾಜ್ಯದಲ್ಲಿರುವ ಸಾಕಷ್ಟು ಸರಕಾರೇತರ ಸಂಸ್ಥೆಗಳು, ಸಂಘಟನೆಗಳು ಏನನ್ನೂ ಅಪೇಕ್ಷಿಸದೇ ಕೊರೋನ ಸೋಂಕಿನ ವಿರುದ್ಧ ಮಾನವೀಯ ಸೇವೆ ನೀಡುತ್ತಿವೆ. ಈ ಸಂಘ, ಸಂಸ್ಥೆಗಳ ಜತೆಗೆ ಆರೋಗ್ಯ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಅವರು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News