ಹಫೀಝ್, ಮಲಿಕ್ ನಿವೃತ್ತಿಯಾಗಬೇಕು

Update: 2020-04-07 05:39 GMT

ಕರಾಚಿ, ಎ.6: ಹಿರಿಯ ಆಟಗಾರರಾದ ಮುಹಮ್ಮದ್ ಹಫೀಝ್ ಹಾಗೂ ಶುಐಬ್ ಮಲಿಕ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ಗೌರವಪೂರ್ವಕವಾಗಿ ನಿವೃತ್ತಿಯಾಗಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಹಾಗೂ ಖ್ಯಾತ ವೀಕ್ಷಕವಿವರಣೆಗಾರ ರಮೀಝ್ ರಾಜಾ ಸಲಹೆ ನೀಡಿದ್ದಾರೆ.

‘‘ಪಾಕ್‌ನ ಮಾಜಿ ನಾಯಕರಿಬ್ಬರು ಗೌರವ ಹಾಗೂ ಅಷ್ಟೇ ಸೊಗಸಾದ ರೀತಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕು’’ ಎಂದು ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜಾ ತಿಳಿಸಿದರು.

‘‘ಹಫೀಝ್ ಹಾಗೂ ಮಲಿಕ್ ಕುರಿತು ವೈಯಕ್ತಿಕ ಹೇಳಿಕೆ ನೀಡಲಾರೆ. ಈ ಇಬ್ಬರು ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದರು. ಇದೀಗ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ನಿಂದ ಸಂತೋಷದಿಂದ ನಿವೃತ್ತಿಯಾಗುವ ಕಾಲ ಬಂದಿದೆ’’ ಎಂದರು.

  ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ಬಳಿಕ ಮೂಲೆಗುಂಪಾಗಿದ್ದ ಹಫೀಝ್ ಹಾಗೂ ಮಲಿಕ್‌ರನ್ನು ಫೆಬ್ರವರಿಯಲ್ಲಿ ಪಾಕಿಸ್ತಾನದ ಟ್ವೆಂಟಿ-20 ತಂಡಕ್ಕೆ ವಾಪಸ್ ಕರೆಸಲಾಗಿತ್ತು. ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಮಿಸ್ಬಾವುಲ್ ಹಕ್ ಅವರ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚುಟುಕು ಮಾದರಿ ಕ್ರಿಕೆಟ್‌ಗೆ ಈ ಇಬ್ಬರು ಹಿರಿಯ ಆಟಗಾರರನ್ನು ಆಯ್ಕೆ ಮಾಡಿರುವುದನ್ನು ಹಲವರು ಟೀಕಿಸಿದ್ದರು.

ಹಫೀಝ್(39 ವರ್ಷ) ಹಾಗೂ ಮಲಿಕ್(38)ತಮ್ಮಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಆಡಲು ಬಾಕಿ ಇದೆ ಎಂದು ಒತ್ತಿ ಹೇಳಿದ್ದು, ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಿಗದಿಯಾಗಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡುವುದರೊಂದಿಗೆ ನಿವೃತ್ತಿಯಾಗುವುದಾಗಿ ಹಫೀಝ್ ಹೇಳಿದ್ದಾರೆ.

ಮಲಿಕ್ ನಾಲ್ಕು ವರ್ಷಗಳ ಹಿಂದೆ ಟೆಸ್ಟ್‌ನಿಂದ ನಿವೃತ್ತಿಯಾಗಿದ್ದು, ಕಳೆದ ವರ್ಷ ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ನಿಂದ ದೂರ ಸರಿದಿದ್ದರು. ಮಲಿಕ್ ತನ್ನ ಭವಿಷ್ಯದ ಯೋಜನೆಯ ಬಗ್ಗೆ ವೌನವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News