ಗಂಗಮ್ಮನ ಸಾವಿಗೆ ಸರಕಾರವೆ ನೇರ ಹೊಣೆ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

Update: 2020-04-07 17:51 GMT

ಬೆಂಗಳೂರು, ಎ.7: ಲಾಕ್‍ಡೌನ್‍ನಿಂದ ಕಗೆಟ್ಟ ಸಿಂಧನೂರಿನ ವೆಂಕಟೇಶ್ವರ ಕಾಲನಿಯ ನಿವಾಸಿ ಗಂಗಮ್ಮ ತನ್ನ ಊರು ಸೇರಿಕೊಳ್ಳಲು ಬೆಂಗಳೂರಿನಿಂದ ಸಿಂಧನೂರಿಗೆ ಕಾಲ್ನಡಿಗೆಯಲ್ಲಿ ನಡೆದು ಬರುವ ಮಾರ್ಗಮಧ್ಯೆ ಹಸಿವು ಮತ್ತು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ತಿಳಿಸಿದ್ದಾರೆ.

ಈ ಸಾವಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸೇರಿ ಜಿಲ್ಲಾಡಳಿತವೆ ನೇರ ಹೊಣೆಯಾಗಿದೆ. ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರಕ್ಕಾಗಿ ಲಾಕ್‍ಡೌನ್ ನಿರ್ಧಾರ ಒಳ್ಳೆಯದೆ. ಆದರೆ, ಇದನ್ನು ಘೋಷಣೆ ಮಾಡುವ ಮುನ್ನ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ದೇಶದ ಕೋಟ್ಯಂತರ ವಲಸೆ ಕಾರ್ಮಿಕರು, ಅಲೆಮಾರಿಗಳು, ದಿನಗೂಲಿ ನೌಕರರು ಸೇರಿದಂತೆ ಇತರೆ ದುಡಿಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅಗತ್ಯ ಇರುವ ಎಲ್ಲ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಲಾಕ್‍ಡೌನ್ ಘೋಷಣೆ ಮಾಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಸರಿಯಾದ ಪೂರ್ವ ಸಿದ್ಧತೆಗಳಿಲ್ಲದೆ, ಏಕಾಏಕಿ ದೇಶವನ್ನು ಲಾಕ್‍ಡೌನ್ ಮಾಡಿದ ಪರಿಣಾಮ ದೇಶದ ಕೋಟ್ಯಂತರ ಜನತೆಯ ಬದಕನ್ನು ಸರಕಾರ ಬೀದಿಗೆ ತಂದು ನಿಲ್ಲಿಸಿದಂತಾಗಿದೆ. ಅದರ ಪರಿಣಾಮವಾಗಿ ದೇಶವ್ಯಾಪಿ ಎಲ್ಲೆಡೆಯೂ ಕೊರೋನ ವೈರಸ್‍ಕ್ಕಿಂತಲೂ ಹಸಿವು, ಅನಾರೋಗ್ಯ ನೀರಿನ ದಾಹ ಮತ್ತು ಇತ್ಯಾದಿ ಜೀವನಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಸಿಲುಕಿದ 20ಕ್ಕಿಂತ ಹೆಚ್ಚು ಮಂದಿ ಈಗಾಗಲೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಾಹೀರ್ ಹುಸೇನ್ ದೂರಿದ್ದಾರೆ.

ಅದಕ್ಕೆ ನಮ್ಮ ಕಣ್ಣ ಮುಂದೆ ಇರುವ ಉದಾಹರಣೆ ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿ ಗಂಗಮ್ಮಳ ಸಾವು. ಈ ಸಾವಿಗೆ ಸರಕಾರದ ನಿರ್ಲಕ್ಷ್ಯ ಮತ್ತು ಈ ನೀತಿಗಳೆ ನೇರ ಕಾರಣ. ಈ ಕೂಡಲೆ ಗಂಗಮ್ಮಳ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. ಮತ್ತು ಇಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಅಸಂಖ್ಯಾತ ಜನ ಸಮುದಾಯವನ್ನು ಪಾರು ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಜಿಲ್ಲಾಡಳಿತ, ಸ್ಥಳೀಯಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಶೇಷ ಗಮನ ಹರಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News