ಕೊರೋನ ಹೊರತುಪಡಿಸಿದ ಆರೋಗ್ಯ ಸೇವೆಗಳಿಗೆ ಓಲಾ, ಉಬರ್: ಆರೋಗ್ಯ ಸಚಿವ ಶ್ರೀರಾಮುಲು

Update: 2020-04-08 17:16 GMT

ಬೆಂಗಳೂರು, ಎ.8: ರಾಜ್ಯ ಸರಕಾರದ ಆರೋಗ್ಯ ಇಲಾಖೆಯು ಆ್ಯಪ್ ಆಧರಿತ ಸಂಚಾರ ಸೇವೆಗಳಾದ ಓಲಾ. ಊಬರ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ರೋಗಿಗಳಿಗೆ ವೈದ್ಯಕೀಯ ತುರ್ತು ಸೇವೆಗಳನ್ನು ಪೂರೈಸಲಾಗುತ್ತದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆ್ಯಪ್ ಆಧರಿತ ಸಂಚಾರ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇತರ ವೈದ್ಯಕೀಯ ಸೇವೆಗಳನ್ನು ನಿಲ್ಲಿಸಬಾರದು, ರೋಗಿಗಳಿಗೆ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 

ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊರೋನ ರೋಗಿಗಳನ್ನು ಆಸ್ಪತ್ರೆಗಳು ಮತ್ತು ಕೊರೋನ ಕೇಂದ್ರಗಳಿಗೆ ಸಾಗಿಸಲು 108 ಆ್ಯಂಬುಲೆನ್ಸ್ ಸೇವೆಗಳನ್ನು ಬಳಸಲಾಗುತ್ತಿದೆ. ಡಯಾಲಿಸಿಸ್, ಕಿಮೋಥೆರಪಿ ಮೊದಲಾದ ತುರ್ತು ವೈದ್ಯಕೀಯ ಸೇವೆಗಳ ರೋಗಿಗಳಿಗೆ ಅನುಕೂಲವಾಗಲು ಓಲಾ, ಊಬರ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ರೋಗಿಗಳ ಅನುಕೂಲಕ್ಕೆ 100 ಕ್ಯಾಬ್‍ಗಳನ್ನು ಪೂರೈಸಲಾಗುತ್ತಿದೆ. ಮನೆಯಿಂದ ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ಮನೆಗೆ ರೋಗಿಗಳನ್ನು ರವಾನಿಸುವುದಕ್ಕಾಗಿ ಮಾತ್ರ ಈ ಸೇವೆಗಳನ್ನು ಪೂರೈಸಲಾಗುತ್ತದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಆರೋಗ್ಯ ಇಲಾಖೆಯ ವೈದ್ಯಕೀಯ ತುರ್ತು ಸೇವಾ ವಾಹನ (ಕೊರೋನ ಪ್ರಕರಣ ಹೊರತುಪಡಿಸಿ) ಎಂದು ವಾಹನದ ಮೇಲೆ ಬರೆಯಲಾಗುತ್ತದೆ. ವಾಹನ ಚಾಲಕರಿಗೆ ಅಗತ್ಯ ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಗಳನ್ನು ಸೇವಾ ಪೂರೈಕೆದಾರರು ನೀಡುತ್ತಾರೆ. ಪ್ರತಿ ವಾಹನದಲ್ಲಿ ಏರ್ ಕಂಡಿಷನಿಂಗ್ ಅನ್ನು ಆಫ್ ಮಾಡಿರುವುದು ಕಡ್ಡಾಯ ವಾಗಿರುತ್ತದೆ. ಇದರೊಂದಿಗೆ ಕಿಟಕಿ ಗಾಜುಗಳನ್ನು ತೆರೆದಿರಬೇಕಾಗಿರುತ್ತದೆ. ಈ ಸೇವೆಗಳು ಎ.15ರವರೆಗೆ ಲಭ್ಯವಿರಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News