ದೇಶವೇ ಸ್ತಬ್ಧ, ಜನಸಾಮಾನ್ಯರು ಬೀದಿ ಪಾಲು

Update: 2020-04-09 04:29 GMT

ಇಂಡಿಯಾದಲ್ಲಿ ಕಳೆದ ಡಿಸೆಂಬರ್‌ಗೂ ಮೊದಲೇ ಅಗತ್ಯ ಎಚ್ಚರಿಕೆ ತೆಗೆದುಕೊಂಡು ವಿಮಾನ ನಿಲ್ದಾಣಗಳಲ್ಲಿ ಪರಿಪೂರ್ಣ ರೀತಿಯಲ್ಲಿ ಬಂದೋಬಸ್ತ್ ಮಾಡಬೇಕಿತ್ತು. ಅಂತಹ ಸೋಂಕಿರುವವರನ್ನು ಪ್ರತ್ಯೇಕಗೊಳಿಸಿಟ್ಟು ಚಿಕಿತ್ಸೆ ನೀಡುವ ಕನಿಷ್ಠ ಎಚ್ಚರಿಕೆ ಮಾಡಿದ್ದರೆ ಇಂದಿನ ಸ್ಥಿತಿ ಬರಲು ಸಾಧ್ಯವೇ ಇರಲಿಲ್ಲ. ಅದನ್ನು ಕೇರಳವೂ ಸೇರಿದಂತೆ ಯಾವ ರಾಜ್ಯ ಸರಕಾರಗಳಾಗಲಿ, ಕೇಂದ್ರ ಸರಕಾರವಾಗಲಿ ಮಾಡದೇ ಅಮಾನವೀಯ ನಿರ್ಲಕ್ಷ ವಹಿಸಿತು.

ಈ ಗಾಗಲೇ ಜಾಗತಿಕವಾಗಿ 33,562 ರಷ್ಟು ಜನರನ್ನು ಬಲಿತೆಗೆದುಕೊಂಡ ಕೊರೋನ ವೈರಸ್(ನೋವೆಲ್ ಕೋವಿಡ್-19)ನ ಪರಿಣಾಮಗಳು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭೀಕರವಾಗತೊಡಗಿವೆ. ಸುಮಾರು 199 ರಾಷ್ಟ್ರಗಳಿಗೆ ಇದು ಹರಡಿದೆ. ಇದುವರೆಗೂ ಜಗತ್ತಿನ ಒಟ್ಟು 7,11,264 ಜನರಿಗೆ ಕೊರೋನ ಸೋಂಕು ತಗಲಿದ್ದು ಅದರಲ್ಲಿ 1,50,825 ಜನರು ಗುಣಮುಖರಾಗಿದ್ದಾರೆ. ಈಗ ಜಾಗತಿಕವಾಗಿ 5,26,877 ಜನರು ಸೋಂಕಿತರಿದ್ದು, ಅದರಲ್ಲಿ 5,00,169 ( ಶೇ.95) ಜನರು ಸಣ್ಣ ಪ್ರಮಾಣದ ಬಾಧೆಗಳಿಗೆ ಒಳಗಾಗಿದ್ದರೆ, 26,708 (ಶೇ.5) ಜನರು ಗಂಭೀರ ಸ್ವರೂಪದ ಬಾಧೆಗಳಿಗೆ ಒಳಗಾಗಿದ್ದಾರೆ. ಇದು ಮಾ.29ರವರೆಗಿನ ಅಂಕಿ ಅಂಶಗಳಾಗಿವೆ.

ಚೀನಾದ ವುಹಾನ್‌ನಲ್ಲಿ ಕಾಣಿಸಿದ ಈ ವೈರಸ್ ನಂತರ ಇಡೀ ಜಗತ್ತಿನಾದ್ಯಂತ ಹರಡತೊಡಗಿತು. ವುಹಾನ್ ಪ್ರಾಂತದಲ್ಲಿ 3,208 ಜನರು ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ. ಆದರೆ ಚೀನಾ ವುಹಾನ್ ಪ್ರಾಂತದಿಂದ ಹೊರಗೆ ಈ ವೈರಸ್ ಹರಡುವುದನ್ನು ತಡೆಗಟ್ಟಿದ್ದಲ್ಲದೆ ವುಹಾನ್ ನಲ್ಲೂ ಅದರ ಹರಡುವಿಕೆಯನ್ನು ಈಗ ತಡೆಗಟ್ಟಿದೆ. ಸೌತ್ ಕೊರಿಯದಲ್ಲೂ ಕ್ಷಿಪ್ರ ತಪಾಸಣೆ ಹಾಗೂ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದರಿಂದ ವೈರಸ್ ಹರಡುವುದನ್ನು ತಡೆಗಟ್ಟಲಾಗಿದೆ. ಇನ್ನು ಕ್ಯೂಬಾ ಹಾಗೂ ವೆನೆಝುವೆಲದಂತಹ ರಾಷ್ಟ್ರಗಳು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಂಡು ವೈರಸ್ ಹರಡುವಿಕೆಯನ್ನು ತಡೆಗಟ್ಟಿದ್ದಲ್ಲದೇ ಕೊರೋನದಿಂದ ತೀವ್ರವಾಗಿ ಪೀಡಿತವಾಗಿರುವ ಇಟಲಿ, ಸ್ಪೈನ್‌ನಂತಹ ರಾಷ್ಟ್ರಗಳಿಗೆ ವೈದ್ಯಕೀಯ ಸಹಾಯ ಒದಗಿಸತೊಡಗಿದೆ. ಇಟಲಿಯಲ್ಲಿ ಸೋಂಕಿತರ ಪ್ರಮಾಣ ಹಾಗೂ ಮರಣದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಅಮೆರಿಕದಲ್ಲಿ ಇಟಲಿಗಿಂತಲೂ ಹೆಚ್ಚಿನ ಸಾವುಗಳು ದಾಖಲಾಗತೊಡಗಿವೆ. ಯುನೈಟೆಡ್ ಕಿಂಗ್ ಡಂ, ಫ್ರಾನ್ಸ್, ಜರ್ಮನಿ, ಇರಾನ್, ಬ್ರೆಝಿಲ್, ಟರ್ಕಿ ಮೊದಲಾದ ರಾಷ್ಟ್ರಗಳು ಕೊರೋನ ಸೋಂಕಿನ ಭೀಕರ ಪರಿಣಾಮಗಳಿಗೆ ತುತ್ತಾಗಿವೆ. ಚೀನಾದಲ್ಲಿ ಹೊಸ ಕೊರೋನ ವೈರಸ್ ದಾಳಿ ನವೆಂಬರ್‌ನಲ್ಲಿಯೇ ಶುರುವಾಗಿತ್ತು. ಅದರ ಸುದ್ದಿ ಜಗತ್ತಿನಾದ್ಯಂತ ಹರಡಲಾರಂಭಿಸಿತು. ಡಿಸೆಂಬರ್ ವೇಳೆಗೆ ನೋವೆಲ್ ಕೋವಿಡ್-19 ಎಂದು ಹೆಸರಿಸಿದ ಈ ವೈರಸ್‌ನ ಹರಡುವಿಕೆಯ ಅಪಾಯವನ್ನು ಗುರುತಿಸಲಾಗಿತ್ತು. ಚೀನಾ ಹಿಂದೆಂದೂ ಮಾಡದ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ವುಹಾನ್ ಪ್ರಾಂತವನ್ನು ಇತರ ಪ್ರದೇಶಗಳಿಂದ ಪ್ರತ್ಯೇಕಗೊಳಿಸಿದ್ದಲ್ಲದೇ ಸೋಂಕು ತಗಲಿರುವ ವ್ಯಕ್ತಿಗಳನ್ನು ಕೂಡ ಪ್ರತ್ಯೇಕಗೊಳಿಸಿಟ್ಟು ಚಿಕಿತ್ಸೆ ನೀಡಲು ಶುರುಮಾಡಿತು. ಆ ಪ್ರದೇಶಕ್ಕೆ ವಿಮಾನಯಾನಗಳನ್ನು ರದ್ದುಗೊಳಿಸಿತು. ಜನರು ಪರಸ್ಪರ ಗುಂಪು ಗುಂಪಾಗಿ ಸೇರದಂತೆ ನೋಡಿಕೊಂಡಿತು. ಮನೆಗಳಲ್ಲೇ ಉಳಿಯುವಂತೆ ವ್ಯವಸ್ಥೆ ಮಾಡಿತು. ಹಾಗೆ ಮಾಡುವಾಗ ಅಗತ್ಯ ವ್ಯವಸ್ಥೆಗಳನ್ನು ಮಾಡಿತ್ತು. ಕ್ಷಿಪ್ರವಾಗಿ ಕೊರೋನ ರೋಗಿಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಯನ್ನು ನಿರ್ಮಿಸಿತು. ನಂತರವೂ ವೈರಸ್ ಹರಡಲಾರಂಭಿಸಿದಾಗ ಜನವರಿ ಕೊನೆಯ ವಾರದಿಂದಲೇ ಚೀನಾ ವುಹಾನ್ ಪ್ರದೇಶವನ್ನು ‘ಲಾಕ್‌ಡೌನ್’ ಮಾಡಿತು. ಸುಮಾರು 760 ದಶಲಕ್ಷ ಜನರನ್ನು ಈ ಪ್ರಯೋಗದೊಳಗೆ ಇಟ್ಟಿತು. ಇದು ಚಾರಿತ್ರಿಕ ವೈದ್ಯಕೀಯ ಕ್ರಮವೆಂದೇ ಗುರುತಿಸಲಾಗಿದೆ. ಚೀನಾ ಈಗಾಗಲೇ ‘ಲಾಕ್‌ಡೌನ್’ ಹಿಂದೆಗೆದುಕೊಂಡಿದ್ದು ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆಯನ್ನು ಮುಂದುವರಿಸಿದೆ.

ಚೀನಾ ಈ ಎಲ್ಲ ಕ್ರಮಗಳ ಮೂಲಕ ಕೊರೋನ ಸೋಂಕಿನ ಹರಡುವಿಕೆಯನ್ನು ತಡೆಯಿತು. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಈ ನಡೆಯನ್ನು ಶ್ಲಾಘಿಸಿತು. ಆದರೆ ಅಮೆರಿಕ ಸರಕಾರದ ನಿರ್ಲಕ್ಷದ ಕಾರಣದಿಂದಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಅಮೆರಿಕದ ಜನರು ಕೊರೋನದಿಂದಾಗಿ ಸಾವಿಗೀಡಾಗಬಹುದು ಎಂದು ಅಂದಾಜಿದೆ. ಈಗದು ಇನ್ನೂ ಜಾಸ್ತಿಯಾಗಬಹುದೇನೋ ಎಂದು ಅನಿಸುತ್ತಿದೆ.

    ಇಂಡಿಯಾದಲ್ಲಿ ವಿಮಾನ ಪ್ರಯಾಣಿಕರ ಮೂಲಕ ಒಂದು ಸಾವಿರಕ್ಕೂ ಹೆಚ್ಚಿನ ಜನರಿಗೆ ಹರಡಿದ ಕೊರೋನ ವ್ಯಾಪಿಸತೊಡಗಿದೆ. ಈಗಾಗಲೇ 95 ಜನರು ಗುಣಮುಖ ರಾಗಿದ್ದು, 27 ಜನರನ್ನು ಅದು ಬಲಿ ಪಡೆದಿದೆ ಎನ್ನಲಾಗಿದೆ. ಪ್ರಸ್ತುತ 902 ಸಣ್ಣ ಪ್ರಮಾಣದ ಬಾಧೆಯಿರುವವರು ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಸ್ವರೂಪದ ಪ್ರಕರಣಗಳಿಲ್ಲವೆಂದು ಮಾರ್ಚ್ ಕೊನೆಯ ಅಂಕಿ ಅಂಶಗಳು ಹೇಳುತ್ತಿವೆ. ಆದರೆ ಈಗ ವೈರಸ್ ಹರಡುವಿಕೆಯ ಮೂರನೇ ಹಂತ ತಲುಪಿ ಸಮುದಾಯಗಳಲ್ಲಿ ಹರಡುವ ಅಪಾಯ ಎದುರಾಗಿದೆ. ಈಗಾಗಲೇ ಮಾ.24ರ ಮಧ್ಯ ರಾತ್ರಿಯಿಂದ 21 ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ‘ಲಾಕ್‌ಡೌನ್’ ಘೋಷಿಸಲಾಗಿದೆ. ಇದು ಕೊರೋನಗಿಂತಲೂ ಭೀಕರ ಪರಿಣಾಮಗಳನ್ನು ದೇಶದ ಜನಸಾಮಾನ್ಯರ ಮೇಲೆ ಉಂಟು ಮಾಡುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಕೊರೋನ ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುವವರಿಗಿಂತಲೂ ಲಾಕ್ ಡೌನ್‌ನಿಂದಾಗಿ ಸಾಯುವ ಸಂಖ್ಯೆ ಹೆಚ್ಚಾಗಬಹುದೆಂಬ ಭೀತಿ ಎದುರಾಗಿದೆ. ಈಗಾಗಲೇ ಮೂವರು ಮಕ್ಕಳೂ ಸೇರಿದಂತೆ ಇಪ್ಪತ್ತರಷ್ಟು ಜನರು ಇದರಿಂದಾಗಿ ಪ್ರಾಣ ಕಳೆದುಕೊಂಡಿರುವ ವರದಿಗಳು ಬಂದಿವೆ. ಜೊತೆಗೆ ಕೊರೋನ ಹರಡುವಿಕೆಯನ್ನು ತಡೆಯುವುದರ ಬದಲು ಈ ಲಾಕ್‌ಡೌನ್ ಅದರ ಹರಡುವಿಕೆಯನ್ನು ಹೆಚ್ಚು ಮಾಡುವ ಭೀತಿಯೂ ಎದುರಾಗಿದೆ. ಯಾವುದೇ ಪರ್ಯಾಯ ಮಾರ್ಗಗಳಿಲ್ಲದ ಜನರು ತಮ್ಮ ಊರುಗಳಿಗೆ ನಡೆದುಕೊಂಡು ಗುಳೇ ಹೋಗತೊಡಗಿದ್ದಾರೆ. ಮಕ್ಕಳು, ತಮ್ಮ ವಸ್ತುಗಳನ್ನು ಹೊತ್ತುಕೊಂಡು ವಾಹನ ಸೌಲಭ್ಯವಿಲ್ಲದೇ ದೊಡ್ಡ ದೊಡ್ಡ ಗುಂಪುಗಳಲ್ಲಿ ನಡೆದುಕೊಂಡು ಹೋಗುವ ದೃಶ್ಯಗಳು ಹೃದಯವಿದ್ರಾವಕವಾಗಿವೆ. ಊಟ ನೀರಿಲ್ಲದೇ ಪರಿತಪಿಸತೊಡಗಿದ್ದಾರೆ.

 ಇಂಡಿಯಾದಲ್ಲಿ ಕಳೆದ ಡಿಸೆಂಬರ್‌ಗೂ ಮೊದಲೇ ಅಗತ್ಯ ಎಚ್ಚರಿಕೆ ತೆಗೆದುಕೊಂಡು ವಿಮಾನ ನಿಲ್ದಾಣಗಳಲ್ಲಿ ಪರಿಪೂರ್ಣ ರೀತಿಯಲ್ಲಿ ಬಂದೋಬಸ್ತ್ ಮಾಡಬೇಕಿತ್ತು. ಅಂತಹ ಸೋಂಕಿರುವವರನ್ನು ಪ್ರತ್ಯೇಕಗೊಳಿಸಿಟ್ಟು ಚಿಕಿತ್ಸೆ ನೀಡುವ ಕನಿಷ್ಠ ಎಚ್ಚರಿಕೆ ಮಾಡಿದ್ದರೆ ಇಂದಿನ ಸ್ಥಿತಿ ಬರಲು ಸಾಧ್ಯವೇ ಇರಲಿಲ್ಲ. ಅದನ್ನು ಕೇರಳವೂ ಸೇರಿದಂತೆ ಯಾವ ರಾಜ್ಯ ಸರಕಾರಗಳಾಗಲಿ, ಕೇಂದ್ರ ಸರಕಾರವಾಗಲಿ ಮಾಡದೇ ಅಮಾನವೀಯ ನಿರ್ಲಕ್ಷ ವಹಿಸಿತು.

ಇಂತಹದೇ ನಿರ್ಲಕ್ಷತೆಗಳನ್ನೇ ಅಮೆರಿಕ, ಯೂರೋಪ್‌ಗಳ ಮುಂದುವರಿದ ರಾಷ್ಟ್ರಗಳೂ ಮಾಡಿದ್ದವು. ಅಲ್ಲಿನ ವಿದ್ಯಮಾನಗಳನ್ನು ನೋಡಿದರೆ ಆ ರಾಷ್ಟ್ರಗಳ ಆಳುವವರು ತಮ್ಮ ನಾಗರಿಕರನ್ನು ಬಲಿ ಹಾಕುತ್ತಿವೆ ಎನಿಸುತ್ತದೆ.

 ನಮ್ಮ ದೇಶದಲ್ಲಿ ಈಗಲೂ ಕೊರೋನ ಪೀಡಿತರಿಗೆ ಅಗತ್ಯ ವೈದ್ಯಕೀಯ ವ್ಯವಸ್ಥೆ, ಪರೀಕ್ಷಾ ಪರಿಕರಗಳೂ ಭದ್ರತಾ ಪರಿಕರಗಳನ್ನು ಅಗತ್ಯವಿರುವಷ್ಟು ಪೂರೈಸಲು ಯಾವುದೇ ಗಂಭೀರ ಕ್ರಮಗಳನ್ನು ನಮ್ಮ ಸರಕಾರ ತೆಗೆದುಕೊಂಡಿಲ್ಲ. ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಅತ್ಯಗತ್ಯ ಭದ್ರತಾ ಪರಿಕರಗಳ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿಲ್ಲ.

 ಬಹುಸಂಖ್ಯಾತ ಬಡ ಹಾಗೂ ಕೆಳಮಧ್ಯಮವರ್ಗದ ಜನರಿಗೆ ಯಾವುದೇ ಸರಿಯಾದ ಪರ್ಯಾಯ ವ್ಯವಸ್ಥೆಯ ಸೊಲ್ಲೆತ್ತದೇ ಇಡೀ ದೇಶವನ್ನೇ ಸಂಪೂರ್ಣ ಕರ್ಫ್ಯೂ ರೀತಿಯ ಲಾಕ್ ಡೌನ್ ಮಾಡಿರುವುದರ ಹಿಂದೆ ಗುಪ್ತ ಹಾಗೂ ಬಹಿರಂಗ ಕಾರ್ಯಸೂಚಿಗಳು ಕಾಣಿಸುತ್ತಿವೆ. ಈ ರೀತಿಯ ಕ್ರಮಗಳ ವಿರುದ್ಧ ತೀವ್ರ ಟೀಕೆಗಳು ಬರಲಾರಂಭಿಸಿದ ನಂತರ ನಿರ್ಮಲಾ ಸೀತಾರಾಮನ್ ಮೂಲಕ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಕೂಡ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಬಿಟ್ಟರೆ ಬೇರೇನಲ್ಲ. ಯಾಕೆಂದರೆ ಅದರಲ್ಲಿ ಹೊಸದಾಗಿ ಏನೂ ಇರಲಿಲ್ಲ. ಹೆಚ್ಚಿನವು ಆಯವ್ಯಯದಲ್ಲಿ ಘೋಷಿಸಿದ ಹಣವಾಗಿವೆ. ಜೊತೆಗೆ ಗಣಿಗಾರಿಕಾ ಸೆಸ್‌ಗಳ ಮೂಲಕ ಸಂಗ್ರಹಿಸಿದ ಹಣದ ಬಳಕೆ ಇತ್ಯಾದಿ ಸಲಹೆಗಳು ಸೇರಿವೆ.

 ಜನತಾ ಕರ್ಫ್ಯೂ, ಲಾಕ್ ಡೌನ್ ನೆಪಗಳಲ್ಲಿ ದೇಶದ ಹಲವಾರು ಕಡೆಗಳಲ್ಲಿ ಪೊಲೀಸ್ ದಬ್ಬಾಳಿಕೆಗಳು, ಮಾರಣಾಂತಿಕ ಹಲ್ಲೆಗಳು, ಅತಿರೇಕಗಳು ನಡೆಯಲಾರಂಭಿಸಿವೆ. ಈಗಾಗಲೇ ಪೊಲೀಸರ ಹೊಡೆತಗಳಿಂದಾಗಿ ಎರಡು ಮರಣಗಳು ದಾಖಲಾಗಿವೆ. ದೇವರು ಧರ್ಮದ ಹೆಸರಿನಲ್ಲಿ ಸಮೂಹ ಸನ್ನಿಯನ್ನು ಹರಡುವ ಕಾರ್ಯದಲ್ಲಿ ಆಳುವ ಪಕ್ಷದವರೇ ಭಾಗಿಯಾಗುತ್ತಿರುವುದು ಕೂಡ ಕಾಣಿಸುತ್ತಿವೆ.

 ಉತ್ತರ ಪ್ರದೇಶದ್ದಂತೂ ಅತಿರೇಕದ ಉನ್ನತ ಹಂತವೆಂದು ಅನಿಸಲಾರಂಭಿಸಿವೆ. ಉತ್ತರ ಪ್ರದೇಶದಿಂದ ದೇಶದ ಹಲವು ಭಾಗಗಳಲ್ಲಿ ದುಡಿಯಲು ಹೋದವರು ಲಾಕ್ ಡೌನ್ ಕಾರಣ ನಡೆದುಕೊಂಡು ಬರಲಾರಂಭಿಸಿದ್ದಾರೆ. ಆದರೆ ಅವರಿಗೆ ಕನಿಷ್ಠ ಪ್ರಯಾಣ ವ್ಯವಸ್ಥೆ ಸರಿಯಾಗಿ ಮಾಡದೇ ಮಾಡಿದ ಅಲ್ಪಸ್ವಲ್ಪ ಸಾರಿಗೆ ವ್ಯವಸ್ಥೆಗೂ ದುಬಾರಿ ಹಣ ಪಡೆಯುವ ಮನಸ್ಥಿತಿ ಆದಿತ್ಯನಾಥ್ ಸರಕಾರದ್ದಾಗಿದೆ. ಇದರ ಮದ್ಯೆಯೇ ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ 3+8 ರೂ. ಹೆಚ್ಚಿಸಿದೆ.

ಸಿಎಎಯ ವಿರೋಧಿ ದನಿಗಳನ್ನು ವ್ಯವಸ್ಥಿತವಾಗಿ ಅಡಗಿಸಲು ಕೊರೋನ ಕಾರಣವನ್ನು ಮುಂದೊಡ್ಡಲಾಗಿದೆ.

ಮೋದಿ ನೇತೃತ್ವದ ಸರಕಾರ ಮಧ್ಯಮವರ್ಗವನ್ನು ಹಲವು ವಿಧಾನಗಳ ಮೂಲಕ ಕೊರೋನ ಫೋಬಿಯಾದಲ್ಲಿ ಬೀಳುವಂತೆ ಮಾಡಿತ್ತು. ನಂತರ ಭಾವನಾತ್ಮಕವಾಗಿ ಮಾತನಾಡಿ ಜನತಾ ಕರ್ಫ್ಯೂ ಹಾಗೂ ಸಂಪೂರ್ಣ ಲಾಕ್‌ಡೌನ್ ನಂತಹ ಕ್ರಮಗಳ ಮೂಲಕ ದಿಟ್ಟ ಹಾಗೂ ಸಮರ್ಥ ಎನ್ನುವಂತೆ ಬಿಂಬಿಸಿಕೊಂಡು ಬೆಂಬಲ ಪಡೆಯುವಲ್ಲಿ ನಿರತವಾಗಿದೆ.

  

ಇದೇ ಮಧ್ಯಮ ವರ್ಗದ ಮೇಲೆಯೇ ಮೋದಿ ಸರಕಾರಇದುವರೆಗೂ ನೀಡಿದ ನೋಟು ರದ್ದತಿ, ಜಿಎಸ್‌ಟಿ ಹೇರಿಕೆ, ಅನಿಲ ಹಾಗೂ ತೈಲಬೆಲೆಯೇರಿಕೆ ಮೊದಲಾದಹೊಡೆತಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ.

 ಈ ಮಧ್ಯೆ ಕೊರೋನ ತಡೆಯಲು ಗೋಮೂತ್ರ ಸೇವನೆ, ಗೋ ಮೂತ್ರ ಮಾರಾಟ, ಹೋಮ, ಹವನ, ಯೋಗ, ‘ಕೊರೋನ ಗೋ’ದಂತಹ ಘೋಷಣೆಗಳು, ಚಪ್ಪಾಳೆ, ತಮಟೆ, ಜಾಗಟೆಗಳು ಸೇರಿದಂತೆ ಬ್ರಾಹ್ಮಣಶಾಹಿ ಕುರುಡು ನಂಬಿಕೆಗಳ ಮೂಲಕವೂ ಜನಸಾಮಾನ್ಯರ ಮೇಲೆ ಮಂಕು ಬೂದಿ ಎರಚುವ ಕಾರ್ಯ ಮಾಡಲಾಗಿತ್ತು. ಸರಕಾರಗಳ ಬೆಂಬಲಗಳೂ ಇವಕ್ಕೆ ಇದ್ದವು. ಈಗ ಕೊರೋನಸೋಂಕನ್ನು ಮುಸ್ಲಿಮ್‌ಅಲ್ಪಸಂಖ್ಯಾತರ ಕುತಂತ್ರವೆಂಬಂತೆ ಬಿಂಬಿಸುವ ಕಾರ್ಯಗಳಲ್ಲಿ ಸಂಘಿ ಮನಸ್ಸುಗಳು ನಿರತವಾಗಿವೆ. ಮಾನವ ಸಮೂಹದ ಮೇಲೆಯೇ ಬಹಳ ಕ್ರೂರವಾಗಿ ಮಾಡುತ್ತಿರುವ ಧಾಳಿಗಳು ಹಾಗೂ ಹೇಯ ವ್ಯಂಗ್ಯಗಳ ರೀತಿಯಲ್ಲಿ ಇವೆಲ್ಲಾ ಕಾಣತೊಡಗಿವೆ. ಮುಂದಿನ ದಿನಗಳಿಗೆ ಸಂಕಷ್ಟಪೀಡಿತ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ತಾಲೀಮುಗಳಾಗಿ ಇವೆಲ್ಲವನ್ನೂ ಉಪಯೋಗಿಸಬಹುದಾದ ಅಪಾಯವೂ ಕಾಣಿಸಲಾರಂಭಿಸಿದೆ.

ಸರಕಾರಗಳು ಈಗಲಾದರೂ ಎಚ್ಚರಿಕೆ ವಹಿಸಬೇಕಿದೆ. ವಹಿಸಿ ಲಾಕ್‌ಡೌನ್ ನಿಂದಾಗಿ ಆಗುತ್ತಿರುವ ಕೊರೋನಹರಡುವಿಕೆ ಹಾಗೂ ಹಸಿವು ನೀರಡಿಕೆಗಳಿಂದಾಗಿ ಸಾಮೂಹಿಕ ಮಾರಣಹೋಮಗಳು ನಡೆಯದಂತೆ ನೋಡಿಕೊಂಡರೆ ಅದು ದೊಡ್ಡ ಸಾಧನೆಯೇ ಆಗಬಹುದು. ಅದನ್ನು ಮಾಡದಿದ್ದರೆ ದೇಶದಲ್ಲಿ ಭಾರೀ ಅರಾಜಕತೆ ಸೃಷ್ಟಿಯಾಗಿ ಭಾರೀ ಭೀಕರ ಪರಿಣಾಮಗಳಾಗುವ ಸಂಭವವಿದೆ. ಜನಜೀವನ, ಆರ್ಥಿಕತೆ, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳಲ್ಲೂ ತೀವ್ರ ರೀತಿಯ ಅಲ್ಲೋಲ ಕಲ್ಲೋಲಗಳು ಸಂಭವಿಸಬಹುದು.

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News