ಆರೋಗ್ಯ ಬಿಕ್ಕಟ್ಟಿನಲ್ಲಿ ಮಾಡಲಾಗುತ್ತಿರುವ ‘ರಾಜಕೀಯ’ಕ್ಕೆ ತೆರೆ ಬೀಳಲಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Update: 2020-04-09 17:16 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 9: ನೂತನ-ಕೊರೋನವೈರಸ್ ಸಾಂಕ್ರಾಮಿಕವನ್ನು ಜಗತ್ತು ಒಗ್ಗಟ್ಟಿನಿಂದ ಎದುರಿಸಬೇಕು ಹಾಗೂ ಜಾಗತಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಮಾಡಲಾಗುತ್ತಿರುವ ‘ರಾಜಕೀಯ’ಕ್ಕೆ ತೆರೆ ಬೀಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಬುಧವಾರ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪಗಳು ಹಾಗೂ ಸಂಸ್ಥೆಗೆ ಅಮೆರಿಕ ನೀಡುತ್ತಿರುವ ದೇಣಿಗೆಯನ್ನು ನಿಲ್ಲಿಸುವ ಬೆದರಿಕೆಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘ಪ್ರಾಮಾಣಿಕ ನಾಯಕತ್ವ’ವನ್ನು ತೋರಿಸಿ ಎಂಬುದಾಗಿ ಅವರು ಅಮೆರಿಕ ಮತ್ತು ಚೀನಾಗಳನ್ನು ವಿಶೇಷವಾಗಿ ಒತ್ತಾಯಿಸಿದರು. ಸಾಂಪ್ರದಾಯಿಕ ದ್ವಿಪಕ್ಷೀಯ ಬೆಂಬಲದೊಂದಿಗೆ ಅಮೆರಿಕದ ದೇಣಿಗೆಯು ಮುಂದುವರಿಯುವುದು ಎಂದು ನಾನು ನಿರೀಕ್ಷಿಸುವುದಾಗಿ ಅವರು ಹೇಳಿದರು.

ಕೊರೋನವೈರಸ್ ಕುರಿತ ತಾಜಾ ಮಾಹಿತಿ, ಅಂಕಿಸಂಖ್ಯೆಗಳು ಮತ್ತು ಪುರಾವೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿಗೆ ನೀಡುತ್ತಾ ಬಂದಿದೆ ಎಂದು ಟೆಡ್ರಾಸ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಪರ ಧೋರಣೆಯನ್ನು ಹೊಂದಿದೆ ಎಂಬ ಟ್ರಂಪ್ ಆರೋಪವನ್ನು ಇಥಿಯೋಪಿಯದ ಮಾಜಿ ವಿದೇಶ ಸಚಿವ ಟೆಡ್ರಾಸ್ ತಿರಸ್ಕರಿಸಿದರು. ‘‘ನಾವು ಎಲ್ಲ ದೇಶದೊಂದಿಗೂ ನಿಕಟ ಸಂಬಂಧ ಹೊಂದಿದ್ದೇವೆ. ನಮಗೆ ಬಣ್ಣಗುರುಡು ಇದೆ’’ ಎಂದರು.

ಈಗ ಒಗ್ಗಟ್ಟಿನಿಂದ ವೈರಸ್ ವಿರುದ್ಧ ಕೆಲಸ ಮಾಡುವ ಸಮಯ: ಗುಟೆರಸ್

ಕೊರೋನವೈರಸ್ ಸಾಂಕ್ರಾಮಿಕಕ್ಕೆ ನೀಡಿರುವ ಆರಂಭಿಕ ಪ್ರತಿಕ್ರಿಯೆಯನ್ನು ಟೀಕಿಸುವ ಸಮಯ ಇದಲ್ಲ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬುಧವಾರ ಹೇಳಿದ್ದಾರೆ.

‘‘ಒಮ್ಮೆ ಈ ಸಾಂಕ್ರಾಮಿಕ ಸಂಪೂರ್ಣವಾಗಿ ನಿರ್ನಾಮಗೊಂಡ ಬಳಿಕ, ಆ ಬಗ್ಗೆ ಸಮಗ್ರವಾಗಿ ಹಿಂದಿರುಗಿ ನೋಡಬೇಕು, ನಿಜ. ಆದರೆ, ಈಗ ಅದಕ್ಕೆ ಸಮಯವಲ್ಲ’’ ಎಂದು ಗುಟೆರಸ್ ಹೇಳಿರುವುದಾಗಿ ಅವರ ವಕ್ತಾರರು ಹೇಳಿದ್ದಾರೆ.

‘‘ಈಗ ವೈರಸ ವಿರುದ್ಧ ಅಂತರ್‌ರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಸಮಯ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News