ಅಮೆರಿಕಾದೊಂದಿಗೆ ಮಾತುಕತೆಗೆ ಮನವಿ ಮಾಡಿಲ್ಲ: Iran
ಅಬ್ಬಾಸ್ ಅರಾಘ್ಚಿ | Photo Credit : AP \ PTI
ಟೆಹ್ರಾನ್, ಜ.28: ಇತ್ತೀಚಿನ ದಿನಗಳಲ್ಲಿ ಅಮೆರಿಕಾದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಅವರೊಂದಿಗೆ ಸಂಪರ್ಕದಲ್ಲಿಲ್ಲ ಮತ್ತು ಮಾತುಕತೆಗೆ ಮನವಿ ಮಾಡಿಲ್ಲ ಎಂದು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
ಹಲವು ಮಧ್ಯವರ್ತಿಗಳು ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ ಮತ್ತು ಇರಾನಿನೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ನನ್ನ ಮತ್ತು ವಿಟ್ಕಾಫ್ ನಡುವೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಪರ್ಕ ಇರಲಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಬೆದರಿಕೆ ಮತ್ತು ಮಾತುಕತೆ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ. ಬೆದರಿಕೆ ಅಥವಾ ಅತಿಯಾದ ಒತ್ತಡಗಳು, ಬೇಡಿಕೆಗಳು ಇದ್ದಾಗ ಮಾತುಕತೆಗಳು ನಡೆಯುವುದಿಲ್ಲ ಎಂದು ಅರಾಘ್ಚಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಕಾನೂನಿನ ಚೌಕಟ್ಟಿನಡಿ ಯುದ್ಧವನ್ನು ತಡೆಯುವ ಯಾವುದೇ ಪ್ರಕ್ರಿಯೆಯನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಹೇಳಿದ್ದಾರೆ.