ಬೆಂಗಳೂರಿನ 2 ವಾರ್ಡ್ ಗಳಲ್ಲಿ 14 ದಿನಗಳ ಕಾಲ ಸೀಲ್‍ಡೌನ್

Update: 2020-04-10 13:22 GMT

ಬೆಂಗಳೂರು, ಎ.10: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅತೀ ಹೆಚ್ಚಿರುವ ಬೆಂಗಳೂರಲ್ಲಿ ಲಾಕ್‍ಡೌನ್ ಬೆನ್ನಲ್ಲೇ ಸೀಲ್‍ಡೌನ್ ಅಸ್ತ್ರ ಪ್ರಯೋಗಿಸಲಾಗಿದೆ.

ಆರಂಭಿಕವಾಗಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 134 ಬಾಪೂಜಿ ನಗರ ಹಾಗೂ ವಾರ್ಡ್ ನಂ. 135 ಪಾದರಾಯನಪುರ ಸೀಲ್‍ಡೌನ್ ಮಾಡಲಾಗಿದ್ದು, ಸ್ಥಳದಲ್ಲಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಸದ್ಯ ಇಲ್ಲಿನ ಪ್ರತಿಯೊಂದು ರಸ್ತೆಗಳನ್ನು ಬಂದ್ ಮಾಡಿದ್ದು, ಅಗತ್ಯ ವಸ್ತುಗಳಿಗೂ ಕೂಡ ಯಾರೂ ಮನೆಯಿಂದ ಹೊರಬರುವಂತಿಲ್ಲ. ಇಡೀ ಏರಿಯಾದಲ್ಲಿ ಎರಡು ವಾರಗಳ ಕಾಲ ಸೀಲ್‍ಡೌನ್ ಇರಲಿದೆ. ಪ್ರತಿಯೊಂದು ಅಂಗಡಿ ಮುಂಗಟ್ಟುಗಳು ಕಂಪ್ಲೀಟ್ ಬಂದ್ ಆಗಲಿವೆ. ಅಗತ್ಯ ವಸ್ತುಗಳ ಪೂರೈಕೆಗೆ ಬಿಬಿಎಂಪಿ ತಯಾರಿ ಮಾಡುತ್ತಿದೆ. ಇಡೀ ಏರಿಯಾದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಸರ್ವೆ ಮಾಡಲಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಸಂಪೂರ್ಣವಾಗಿ ಎರಡು ವಾರ್ಡ್ ಸೀಲ್ ಡೌನ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಜನ ಹೊರಗೆ ಬರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ದೈನಂದಿನ ವಸ್ತುಗಳ ಪೂರೈಕೆ ಬಗ್ಗೆ ಚರ್ಚೆ ಆಗಿದೆ. ಈ ಭಾಗದಲ್ಲಿ ಕೊರೋನ ವೈರಸ್ ಪಾಸಿಟಿವ್ ಹೆಚ್ಚಾಗಿದೆ. ಸೋಂಕು ಹರಡುವ ಸಾಧ್ಯತೆ ಹಿನ್ನೆಲೆ, ಸೀಲ್‍ಡೌನ್ ಮಾಡಲು ಮುಂದಾಗಿದ್ದೇವೆ. ಅವಶ್ಯಕ ವಸ್ತುಗಳನ್ನ ನಾವು ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದರು.

ಈಗ ಹದಿನಾಲ್ಕು ದಿನ ಸೀಲ್ ಡೌನ್ ಮಾಡುತ್ತೇವೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸೀಲ್ ಡೌನ್ ಬಗ್ಗೆ ನಿರ್ಧಾರ ಮಾಡಲಿದ್ದೇವೆ. ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಸರ್ವೆ ಮಾಡುತ್ತಾರೆ. ವಾರ್ಡ್‍ನ ಎಲ್ಲಾ ರಸ್ತೆ ಬಂದ್ ಮಾಡಿ ಎರಡು ರಸ್ತೆ ಮಾತ್ರ ತೆರೆಯುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News