ಕರ್ನಾಟಕ ಗಡಿ ಪ್ರವೇಶಿಸಿ ಗೃಹ ಸಚಿವ ಬೊಮ್ಮಾಯಿಯವರನ್ನು ಪ್ರಶ್ನಿಸಿದ ತಮಿಳುನಾಡು ಪೊಲೀಸರು !

Update: 2020-04-10 12:54 GMT

ಬೆಂಗಳೂರು, ಎ.10: ಲಾಕ್ ಡೌನ್ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದ ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಗುರುತು ತಿಳಿಯದೆ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿ ಗಸ್ತು ನಿರತರಾಗಿರುವ ತಮಿಳುನಾಡು ಪೊಲೀಸರು 'ಲಾಕ್ ಡೌನ್ ಉಲ್ಲಂಘನೆಯೇಕೆ ಮಾಡುತ್ತಿದ್ದೀರಿ' ಎಂದು ಪ್ರಶ್ನಿಸಿದ ಘಟನೆ ಅತ್ತಿಬೆಲೆ ಸಮೀಪದ ಪೊಲೀಸ್ ಚೆಕ್ ಪೋಸ್ಟಿನಲ್ಲಿ ನಡೆದಿದೆ.

ಕರ್ನಾಟಕ ಗಡಿಯೊಳಗಿದ್ದ ಸಚಿವರ ಕಾರನ್ನು ನಿಲ್ಲಿಸಿದ ತಮಿಳುನಾಡು ಪೊಲೀಸರು ಪ್ರಶ್ನಿಸಿದಾಗ ಬೊಮ್ಮಾಯಿ ತಕ್ಷಣ ಬೆಂಗಳೂರು ಗ್ರಾಮೀಣ ಜಿಲ್ಲೆ ಎಸ್‍ಪಿ ರವಿ ಡಿ ಚನ್ನಣ್ಣವರ್ ಅವರನ್ನು ಸಂಪರ್ಕಿಸಿ 'ಹೀಗೇಕಾಯಿತು' ಎಂದು ಪ್ರಶ್ನಿಸಿದ್ದರು. ಈ ಘಟನೆ ಬುಧವಾರ ನಡೆದಿತ್ತು. ಈ ಕುರಿತು ತಿಳಿಯುತ್ತಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಜಂಟಿ  ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಕ್ಷಣ ಅಲ್ಲಿಗೆ ಧಾವಿಸಿದ್ದರು

ಕರ್ನಾಟಕ ಭಾಗದ ಗಡಿ ಪ್ರದೇಶದಲ್ಲಿ ತಮಿಳುನಾಡಿನ ಪೊಲೀಸರು ಬ್ಯಾರಿಕೇಡ್ ಹಾಕಿದ್ದರ ಕುರಿತು ಬೊಮ್ಮಾಯಿ ನಂತರ ಟ್ವೀಟ್ ಮಾಡಿದ್ದಾರೆ.

"ಗಡಿ ಭಾಗದಲ್ಲಿ ತಮಿಳುನಾಡು ಕಡೆ ನೆರಳಿಲ್ಲದೇ ಇದ್ದುದರಿಂದ ಅಲ್ಲಿನ ಪೊಲೀಸರು ಕರ್ನಾಟಕ ಗಡಿ ಭಾಗದಲ್ಲಿ ಬ್ಯಾರಿಕೇಡುಗಳನ್ನು ಹಾಕಿದ್ದಾರೆ. ಅದನ್ನು ತೆರವುಗೊಳಿಸಲು ಹೇಳಿದ ನಂತರ ತೆರವುಗೊಳಿಸಲಾಗಿದೆ'' ಎಂದು ಎಸ್‍ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News