ಬೆಂಗಳೂರು: ದಿಲ್ಲಿಯ ಧಾರ್ಮಿಕ ಸಭೆಗೆ ಸಂಬಂಧಿಸಿದ 147 ಮಂದಿಯ ವರದಿ ನೆಗೆಟಿವ್

Update: 2020-04-10 13:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ಹೊಸದಿಲ್ಲಿಯ ನಿಝಾಮುದ್ದೀನ್ ಮರ್ಕಝ್‍ನಲ್ಲಿ ಆಯೋಜಿಸಿದ್ದ ತಬ್ಲೀಗ್ ಜಮಾತ್‍ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಗೂ ಅವರ ಸಂಪರ್ಕದಲ್ಲಿದ್ದ 150 ಮಂದಿಯಲ್ಲಿ 147 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಮೂರು ಪಾಸಿಟಿವ್ ವರದಿಗಳು ಬಂದಿವೆ ಎಂದು ಹಜ್‍ ಭವನದ ಕ್ವಾರಂಟೈನ್ ಸೆಂಟರ್ ನ ನೋಡಲ್ ಅಧಿಕಾರಿ ಏಜಾಝ್ ಅಹ್ಮದ್ ತಿಳಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಹೆಗಡೆ ನಗರದಲ್ಲಿರುವ ಹಜ್‍ ಭವನದಲ್ಲಿ ಈ 150 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಪಾಸಿಟಿವ್ ವರದಿ ಬಂದಿರುವ ಮೂವರನ್ನು ವಿಕ್ಟೋರಿಯಾ ಹಾಗೂ ರಾಜೀವ್‍ ಗಾಂಧಿ ಆಸ್ಪತ್ರೆಗಳಲ್ಲಿರುವ ಐಸೋಲೇಷನ್ ವಾರ್ಡುಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

114 ಮಂದಿಯನ್ನು ಈಗಾಗಲೆ ಸ್ವಯಂಸೇವಕರ ಸಹಾಯದೊಂದಿಗೆ ಅವರ ಮನೆಗಳಿಗೆ ತಲುಪಿಸಲಾಗಿದೆ. ಇನ್ನುಳಿದಂತೆ 33 ಮಂದಿಯ ಪೈಕಿ 10 ಜನ ಇಂಡೋನೇಷಿಯಾ, 9 ಮಂದಿ ಕಿರ್ಗಿಸ್ತಾನ್, ಒಬ್ಬರು ಸುಡಾನ್, 10 ಮಂದಿ ಕೇರಳ, ಇಬ್ಬರು ತಮಿಳುನಾಡು ಹಾಗೂ ಒಬ್ಬರು ಬಿಹಾರ ರಾಜ್ಯದವರಾಗಿದ್ದಾರೆ. ಇವರನ್ನು ಅವರ ಮೂಲಸ್ಥಾನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಏಜಾಝ್ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News