ಪಕ್ಷಿಗಳಿಗೂ ತಟ್ಟಿದ ಲಾಕ್‍ಡೌನ್‍ ಎಫೆಕ್ಟ್: ಆಹಾರ ಹರಸಿ ವಲಸೆ ಹೋಗುತ್ತಿವೆ ಹಕ್ಕಿಗಳು

Update: 2020-04-10 16:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ವಿಧಾನಸೌಧ ಹಾಗೂ ಹೈಕೋರ್ಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಪಾರಿವಾಳಗಳ ಆವಾಸ ಸ್ಥಾನವಾಗಿದ್ದು, ಲಾಕ್‍ಡೌನ್‍ನಿಂದ ಪಕ್ಷಿಗಳಿಗೂ ಆಹಾರ ಇಲ್ಲದಂತಾಗಿದೆ. ಇದರಿಂದ ಕೆಲ ಪಕ್ಷಿಗಳು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.

ಬೇಸಿಗೆ ಕಾಲವಾದ್ದರಿಂದ ಎಲ್ಲೆಡೆ ತಾಪಮಾನ ಏರಿಕೆಯಾಗಿದ್ದು, ವಿಧಾನಸೌಧ, ಹೈಕೋರ್ಟ್ ಆವರಣ, ಕಬ್ಬನ್ ಪಾರ್ಕ್‍ನಲ್ಲಿ ನೀರಿನ ಲಭ್ಯತೆ ಇಲ್ಲದಿರುವುದು ಪಾರಿವಾಳಗಳು ವಲಸೆ ಹೋಗಲು ಕಾರಣವಾಗಿದೆ. ಪ್ರತಿವರ್ಷ ವಸಂತ ಕಾಲದಲ್ಲಿ ಪಾರಿವಾಳಗಳ ಹಿಂಡು ವಲಸೆ ಬರುತ್ತದೆ. ವಾಯುವಿಹಾರಕ್ಕೆ ಬರುವ ಜನರು ಕಬ್ಬನ್‍ ಪಾರ್ಕ್‍ನಲ್ಲಿ ಪಕ್ಷಿಗಳಿಗೆ ಆಹಾರ ಹಾಕುತ್ತಿದ್ದರು.

ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ನಿತ್ಯ ಕಬ್ಬನ್‍ ಪಾರ್ಕ್‍ಗೆ ಉದ್ಯಾನವನಕ್ಕೆ ಹತ್ತು ಸಾವಿರಕ್ಕೂ ಅಧಿಕ ಜನರು ಬರುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಆದರೆ, ಈಗ ಉದ್ಯಾನವನದಲ್ಲಿ ಪಾರಿವಾಳಗಳು ಆಹಾರವಿಲ್ಲದೆ ಪರದಾಡುವಂತಾಗಿದೆ.

ವಿಧಾನಸೌಧ ಹಾಗೂ ಹೈಕೋರ್ಟ್ ಆವರಣಗಳಲ್ಲಿ ಗೂಡುಗಳನ್ನು ಕಟ್ಟಿರುವ ಪಾರಿವಾಳಗಳು ಆಹಾರ ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ ತೆರಳಿ ಮತ್ತೆ ತಮ್ಮ ಆವಾಸ ಸ್ಥಾನಗಳಿಗೆ ಮರಳುತ್ತವೆ. ಇದರಿಂದ ಪಾರಿವಾಳದ ವಲಸೆ ಪ್ರಮಾಣ ತೀರಾ ಕಡಿಮೆ. ಒಂದು ಅಂದಾಜಿನ ಪ್ರಕಾರ ಶೇ.20 ರಷ್ಟು ಪಾರಿವಾಳಗಳು ವಲಸೆ ಹೋಗಬಹುದು ಎಂದು ಪಕ್ಷಿಗಳ ತಜ್ಞರು ಅಭಿಪ್ರಾಯಿಸಿದ್ದಾರೆ.

ಪಾರ್ಕ್‍ನಲ್ಲಿ ಹಣ್ಣಿನ ಮರಗಳಿಲ್ಲ: ಬೆಂಗಳೂರಿನ ಹಸಿರು ಮನೆ ಎಂಬ ಪ್ರಖ್ಯಾತಿ ಪಡೆದ ಕಬ್ಬನ್ ಪಾರ್ಕ್‍ನಲ್ಲಿ ಸಾವಿರಾರು ವಿವಿಧ ಪ್ರಭೇದಗಳ ಹೂವಿನ ಗಿಡಗಳಿವೆ. ಆದರೆ, ಬೆರಳೆಣಿಕೆಯಷ್ಟು ಮಾವು ಹಾಗೂ ಹಲಸಿನ ಮರಗಳಿದ್ದು, ಈ ಮರಗಳ ಹಣ್ಣುಗಳನ್ನು ಉದ್ಯಾನದ ಸಿಬ್ಬಂದಿಯೇ ಕೊಂಡೊಯ್ಯುತ್ತಿದ್ದಾರೆ ಎಂಬ ಆರೋಪಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News