ನಿರಾಶ್ರಿತರು, ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಆರೋಪ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2020-04-10 17:32 GMT

ಬೆಂಗಳೂರು, ಎ.10: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಿಸಿದ್ದರಿಂದ ನಿರಾಶ್ರಿತರಾದವರು ಹಾಗೂ ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಬಿಬಿಎಂಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಆಶ್ರಯ ವಿಚಾರವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬಿಬಿಎಂಪಿಗೆ ನಗರದಲ್ಲಿರುವ ನಿರಾಶ್ರಿತರು, ವಲಸೆ ಕಾರ್ಮಿಕರ ನಿಖರ ಅಂಕಿ, ಅಂಶ ನೀಡಿ ಎಂದು ಸೂಚಿಸಿತ್ತು. ಆದರೆ, ದತ್ತಾಂಶಗಳನ್ನು ನೀಡದ ಹಿನ್ನೆಲೆ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಬಿಬಿಎಂಪಿ ನೋಡಿಕೊಳ್ಳಬೇಕು. ನಿರಾಶ್ರಿತರ ಸಂಖ್ಯೆಯೇ ತಿಳಿಯದಿದ್ದರೆ ಕರ್ತವ್ಯ ನಿರ್ವಹಣೆ ಹೇಗೆ ಮಾಡುತ್ತೀರಿ. ಸಹಾಯವಾಣಿ ಒಂದರಿಂದಲೇ ನಿರಾಶ್ರಿತರಿಗೆ ಅನುಕೂಲವಾಗುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ನ್ಯಾಯಪೀಠವು ಚಾಟಿ ಬೀಸಿತು.

ಮಹದೇವಪುರ ಫ್ಲೈ ಓವರ್, ಮೆಜೆಸ್ಟಿಕ್ ಬಳಿಯೂ ನಿರಾಶ್ರಿತರಿದ್ದಾರೆ. ಬೆಂಗಳೂರು ಒಂದರಲ್ಲಿಯೇ ರಾಜ್ಯದ ಮೂರನೆ ಒಂದರಷ್ಟು ಕೊರೋನ ಸೋಂಕಿತರಿದ್ದಾರೆ. ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕೆಂದು ಸೂಚಿಸಿದೆ. ನಿರಾಶ್ರಿತರು, ವಲಸೆ ಕಾರ್ಮಿಕರ ಬಗ್ಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು. ಕರ್ನಾಟಕದಲ್ಲಿ ಇದುವರೆಗೂ 207 ಕೊರೋನ ಸೋಂಕಿತರು ಕಂಡು ಬಂದಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News