ಲಾಕ್​ಡೌನ್: ಏಡ್ಸ್ ಸೋಂಕಿತರ ಚಿಕಿತ್ಸೆಗೆ ಅವಕಾಶ ನೀಡುವಂತೆ ಮನವಿ

Update: 2020-04-10 17:51 GMT

ಬೆಂಗಳೂರು, ಎ.10: ಲಾಕ್​ಡೌನ್ ಸಂದರ್ಭದಲ್ಲಿ ಎಚ್ ಐವಿ ಸೋಂಕಿತರಿಗೆ ಪ್ರತಿ ತಿಂಗಳು ಎಆರ್‌ಟಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಕೆ. ಶ್ರೀರಂಗಯ್ಯ ಮನವಿ ಮಾಡಿದ್ದಾರೆ. 

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರು ನಗರ ಮತ್ತು ರಾಜ್ಯದ ಇತರ ಭಾಗದಲ್ಲಿ ಪ್ರದೇಶದಲ್ಲಿ ಕೊರೋನ ಸೋಂಕು ಹರಡುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ಆರೋಗ್ಯ ಇಲಾಖೆಯ ಅಗತ್ಯ ಸೇವೆ ಒದಗಿಸುವಂತೆ ಸೂಚಿಸಿದ್ದಾರೆ. ಎಚ್‌ಐವಿ ಸೋಂಕಿತರು ಆಸ್ಪತ್ರೆಗೆ ಹೋಗಲು ಅನುಕೂಲವಾಗುವಂತೆ ಅವರ ಬಳಿ ಇರುವ ಹಸಿರು ಪುಸ್ತಕ ಮತ್ತು ಎಆರ್‌ಟಿ ಚಿಕಿತ್ಸೆಯ ರೆಕಾರ್ಡ್ ಪುಸ್ತಕವನ್ನೇ ಗುರುತಿನ ಚೀಟಿ ಎಂದು ಪರಿಗಣಿಸಿ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. 

ಎಚ್‌ಐವಿ ಸೋಂಕಿತರ ಪರವಾಗಿ ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಹೋಗಿ ಔಷಧಿ ಪಡೆಯುವ ಅನಿವಾರ್ಯತೆ ಇದ್ದರೆ, ಅಂತಹ ಸಂದರ್ಭದಲ್ಲೂ ಹಸಿರು ಪುಸ್ತಕವನ್ನು ಗುರುತಿನ ಚೀಟಿ ಎಂದು ಪರಿಗಣಿಸುವಂತೆ ಮನವಿ ಮಾಡಿರುವ ಅವರು, ತಮ್ಮ ಅಧೀನ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವಂತೆ ಪತ್ರದಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News