ಕಳಪೆ ಗುಣಮಟ್ಟದ ಪಿಪಿಇ ಕಿಟ್ ವಿತರಣೆ ಆರೋಪ: ಬೆಂಗಳೂರಿನ ಇಎಸ್‍ಐ ಆಸ್ಪತ್ರೆ ವೈದ್ಯರಿಂದ ಪ್ರತಿಭಟನೆ

Update: 2020-04-11 15:34 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.11: ಕೊರೋನ ವೈರಸ್ ಸೋಂಕು ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ನೀಡುತ್ತಿರುವ ಮಾಸ್ಕ್, ಪಿಪಿಇ ಕಿಟ್ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಶನಿವಾರ ರಾಜಾಜಿನಗರದ ಇಎಸ್‍ಐ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.

ಇಎಸ್‍ಐ ಆಸ್ಪತ್ರೆಯಲ್ಲಿ ಇದುವರೆಗೆ ದಾಖಲಾಗಿದ್ದ ಇಬ್ಬರಿಗೆ ಕೊರೋನ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿತ್ತು. ಅದರಲ್ಲಿ ಓರ್ವ ಶನಿವಾರ ಬೆಳಗ್ಗೆ ಮೃತನಾಗಿದ್ದು, ಆತನ ಮೃತದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ತಮಗೂ ಕೊರೋನ ಹರಡುವ ಸಾಧ್ಯತೆಗಳಿವೆ ಎಂಬ ಭೀತಿಗೊಳಗಾಗಿದ್ದು, ಪ್ರತಿಭಟನೆ ನಡೆಸುವ ಮೂಲವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ನೀಡಿರುವ ಮಾಸ್ಕ್ ಹಾಗೂ ಪಿಪಿಇ ಕಿಟ್ ಸಹ ಕಳಪೆಯಾಗಿವೆ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಿದವರಿಗೂ ಕೊರೋನ ಹರಡುವ ಸಾಧ್ಯತೆಗಳಿವೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು 'ಕೊರೋನ ಸೋಂಕಿನ ಶಂಕೆಯಿಂದ ಹಲವರನ್ನು ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರು, ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸದೇ ಮನೆಗೆ ಕಳುಹಿಸಲಾಗುತ್ತಿದೆ. ಇದರ ಬದಲು ನಮ್ಮನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಿ. ನಾವು ಮನೆಗೆ ಹೋದರೆ ನಮ್ಮ ಕುಟುಂಬದವರಿಗೂ ಕೊರೋನ ಸೋಂಕು ತಗಲುಬಹುದು' ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News