ಎಚ್ಚರಿಕೆ: ಮಲದ ವಿಲಕ್ಷಣ ವಾಸನೆ ಕ್ಯಾನ್ಸರ್‌ನ ಸಂಕೇತವಾಗಿರಬಹುದು

Update: 2020-04-11 16:19 GMT

ಈ ಲೇಖನದ ಶೀರ್ಷಿಕೆ ನಿಮಗೆ ಕೊಂಚ ವಿಚಿತ್ರವೆನಿಸಿರಬಹುದು, ಆದರೆ ಇದು ನಿಜ. ಕ್ಯಾನ್ಸರ್ ನಮ್ಮ ಬದುಕನ್ನೇ ನಾಶ ಮಾಡುವ ಶಕ್ತಿಯನ್ನು ಹೊಂದಿರುವ ಶಬ್ಧವಾಗಿದೆ ಮತ್ತು ಇದು ಎಲ್ಲರಿಗೂ ಗೊತ್ತು. ವೈದ್ಯಕೀಯ ಇತಿಹಾಸದಲ್ಲಿ ಈವರೆಗೆ ಸುಮಾರು ಒಂದು ನೂರರಷ್ಟು ಕ್ಯಾನ್ಸರ್ ವಿಧಗಳು ಬೆಳಕಿಗೆ ಬಂದಿವೆ. ಈ ಮಾರಣಾಂತಿಕ ರೋಗವು ಏಕಾಏಕಿ ಉಂಟಾಗುವುದಿಲ್ಲ ಮತ್ತು ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಳ್ಳುವವರೆಗೆ ಹಲವಾರು ಸಂಕೇತಗಳನ್ನು ನೀಡುತ್ತಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಸಾಮಾನ್ಯ ಲಕ್ಷಣಗಳಾಗಿವೆ, ಆದರೆ ನೀವು ಸಾಮಾನ್ಯವಲ್ಲದ ಲಕ್ಷಣಗಳನ್ನು ಗಮನಿಸಲೇಬೇಕು. ಯಾವುದೇ ವಿಲಕ್ಷಣ ವಿಷಯವೂ ನಿಮ್ಮ ಶರೀರವು ನೀಡುತ್ತಿರುವ ಮುಖ್ಯ ಸಂಕೇತವಾಗಿರಬಹುದು. ಅಸಹ್ಯ ವಾಸನೆಯಿಂದ ಕೂಡಿದ ಮಲವು ಇಂತಹ ವಿಲಕ್ಷಣ, ಆದರೆ ಮುಖ್ಯ ಸಂಕೇತವಾಗಿದೆ. ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಸುಪ್ತ ಲಕ್ಷಣವಾಗಿರಬಹುದು. ಈ ಬಗ್ಗೆ ಹೆಚ್ಚಿನ ವಿವರಗಳಿಲ್ಲಿವೆ....

ಏನಿದು ಸಮಸ್ಯೆ?

ಮಲ ವಿಸರ್ಜನೆಯ ವೇಳೆ ಕಟುವಾದ, ವಿಲಕ್ಷಣ ವಾಸನೆಗೆ ಮಲದಲ್ಲಿರುವ ಕೊಬ್ಬಿನಂಶ ಕಾರಣವಾಗಿದ್ದು, ಈ ಸ್ಥಿತಿಯನ್ನು ಸ್ಟಿಟೊರಿಯಾ ಎಂದು ಕರೆಯಲಾಗುತ್ತದೆ. ಮಲದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುವುದು ಈ ಅಸಹ್ಯ ವಾಸನೆಯನ್ನು ಹೊಮ್ಮಿಸುತ್ತದೆ. ಮಲವು ಮುದ್ದೆಮುದ್ದೆಯಾಗಿ ವಿಸರ್ಜನೆಗೊಳ್ಳುವುದಕ್ಕೆ ಮೇದೋಜ್ಜಿರಕ ಗ್ರಂಥಿಯ ಕ್ಯಾನ್ಸರ್ ಕಾರಣವಾಗಿದೆ, ಏಕೆಂದರೆ ಈ ಕ್ಯಾನ್ಸರ್ ಜೀರ್ಣಾಂಗ ಸಮಸ್ಯೆಯಿಂದ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಮಲವು ತೇಲುತ್ತಿರುವ ತೈಲಾಂಶದಿಂದ ಕೂಡಿರಬಹುದು ಮತ್ತು ಅದು ಸಹಜಕ್ಕಿಂತ ಹೆಚ್ಚು ಹಳದಿ ಬಣ್ಣದಲ್ಲಿರಬಹುದು.

ಹೆಚ್ಚಿನ ಸಂದರ್ಭಗಳಲ್ಲಿ ಮೇದೋಜ್ಜೀರಕ ಗ್ರಂಥಿಯು ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ,ಹೀಗಾಗಿ ಆರಂಭದಲ್ಲಿ ಅದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಆದರೆ ಕ್ಯಾನ್ಸರ್ ಪ್ರಗತಿಯಾಗುತ್ತಿದ್ದಂತೆ ಲಕ್ಷಣಗಳು ಗೋಚರಿಸಲು ಆರಂಭವಾಗುತ್ತವೆ. ಮೇದೋಜ್ಜಿರಕ ಗ್ರಂಥಿಯ ಕ್ಯಾನ್ಸರ್ ಮತ್ತು ಚಿಕಿತ್ಸೆ ಮಲಬದ್ಧತೆ,ಅತಿಸಾರ ಮತ್ತು ‘ಲಾರ್ಡ್ ಸ್ಟೂಲ್ ’ಅಥವಾ ಕೊಬ್ಬಿನಿಂದ ಕೂಡಿದ ಮಲದಂತಹ ಸಮಸ್ಯೆಗಳನ್ನುಂಟು ಮಾಡುತ್ತವೆ.

 ಮಲದಲ್ಲಿರುವ ಕೊಬ್ಬು ಲಾರ್ಡ್ ಸ್ಟೂಲ್‌ಗೆ ಕಾರಣವಾಗುತ್ತದೆ, ಇಂತಹ ಸ್ಥಿತಿಯಲ್ಲಿ ಮಲವು ಹೆಚ್ಚು ಹಳದಿ ಬಣ್ಣ ಮತ್ತು ತೈಲಾಂಶ ಹೊಂದಿದ್ದು ಭಯಂಕರ ವಾಸನೆಯನ್ನುಂಟು ಮಾಡುತ್ತದೆ. ವಾಸನೆ ಎಷ್ಟು ಅಸಹ್ಯವಾಗಿರುತ್ತದೆ ಎಂದರೆ ಕಮೋಡ್‌ನ್ನು ಫ್ಲಷ್ ಮಾಡುವುದೂ ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕೊಬ್ಬನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ನಿಮ್ಮ ಶರೀರಕ್ಕೆ ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗಬಹುದು,ಏಕೆಂದರೆ ಕ್ಯಾನ್ಸರ್ ಜೀರ್ಣ ಸಮಸ್ಯೆಗಳನ್ನುಂಟು ಮಾಡುತ್ತದೆ. ನಿರಂತರವಾಗಿ ಅತಿಸಾರದ ಸಮಸ್ಯೆಯಿದ್ದರೆ ಅದೂ ಸಹ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಅಪಾಯವನ್ನು ಸೂಚಿಸಬಹುದು.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಮಾತ್ರವಲ್ಲ,ಆಹಾರ ಕ್ರಮದಲ್ಲಿ ಬದಲಾವಣೆಗಳು,ಔಷಧಿಗಳು ಅಥವಾ ಪೂರಕಗಳು,ಮೂತ್ರದ ಸೋಂಕು,ಪೋಷಕಾಂಶಗಳ ಅಸಮರ್ಪಕ ಹೀರುವಿಕೆ ಮತ್ತು ಜೀರ್ಣಾಂಗ ಕ್ರಿಯೆಯಲ್ಲಿ ಅಸಮತೋಲನ ಇವೂ ಮಲದ ಅಸಹ್ಯ ವಾಸನೆಗೆ ಕಾರಣವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News