ಮಹಿಳಾ ಎನ್‍ಸಿಸಿ ಕೆಡೆಟ್‍ಗಳಿಂದ ತಯಾರಾದ ಆಹಾರ ಕಿಟ್‍ಗಳನ್ನು ವಿತರಿಸಿದ ಅಶ್ವಥ್ ನಾರಾಯಣ

Update: 2020-04-11 17:42 GMT

ಬೆಂಗಳೂರು, ಎ.11: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಆಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿರುವ ಎನ್‍ಸಿಸಿ ಶಿಕ್ಷಾರ್ಥಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು.

ವ್ಹೀಲರ್ ರಸ್ತೆಯ ಎನ್‍ಸಿಸಿ ಅಧಿಕಾರಿಗಳ ಮೆಸ್ (ಕರ್ನಾಟಕ ಮತ್ತು ಗೋವಾ) ನಿರ್ದೇಶನಾಲಯದ ಆವರಣದಲ್ಲಿ 'ಎಕ್ಸ್ ಎನ್‍ಸಿಸಿ ಯೋಗದಾನ್' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಮತ್ತು ಗೋವಾ ಹಿರಿಯ ವಿಭಾಗದ ಸ್ವಯಂಸೇವಕ ಮಹಿಳಾ ಎನ್‍ಸಿಸಿ ಶಿಕ್ಷಾರ್ಥಿಗಳು ಕಾರ್ಮಿಕರು, ಬೀದಿ ವ್ಯಾಪಾರಿಗಳು, ದಿನಗೂಲಿ ನೌಕರರಿಗೆ ಸುಮಾರು 200 ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಸಮಾಜ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಎನ್‍ಸಿಸಿ ನಿರ್ದೇಶನಾಲಯ ಉತ್ತಮ ಕೆಲಸ ಮಾಡುತ್ತಿದೆ. ಸೋಂಕಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಸ್ವಯಂಸೇವಕರಾಗಿ ನೆರವು ಒದಗಿಸಲು ಎನ್‍ಸಿಸಿ ಶಿಕ್ಷಾರ್ಥಿಗಳು ಸ್ವಂತ ಸಂಪನ್ಮೂಲದಿಂದ ದಿನಸಿ ಪದಾರ್ಥಗಳನ್ನು ಒದಗಿಸುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ಸಾಮಾಜಿಕ ಅಂತರ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎನ್‍ಸಿಸಿ ಶಿಕ್ಷಾರ್ಥಿಗಳು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ನೆರವಾಗಬಹುದು. ಎನ್‍ಸಿಸಿ ನಿರ್ದೇಶನಾಲಯದ ಎಲ್ಲ ಸಾಮಾಜಿಕ ಕಾರ್ಯಗಳಿಗೆ  ಕರ್ನಾಟಕ ಸರ್ಕಾರದ ಬೆಂಬಲ ಇರುತ್ತದೆ ಎಂದರು. 

ಈ ವೇಳೆ ಎನ್‍ಸಿಸಿ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಏರ್ ಕಮಾಂಡರ್ ಲಲಿತ್ ಕುಮಾರ್ ಜೈನ್, ಪದಾಧಿಕಾರಿಗಳು, ಎನ್‍ಸಿಸಿ ಶಿಕ್ಷಾರ್ಥಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News