ಹೊಸಕೋಟೆ: ಮನೆಯಿಂದ ಹೊರಗೆ ಬಾರದಂತೆ ಬೈಲನರಸಾಪುರ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಆದೇಶ

Update: 2020-04-11 17:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.11: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಹೋಂ ಕ್ವಾರಂಟೈನ್‍ನಲ್ಲಿರಿಸಿ, ಸಿಆರ್‍ಪಿಸಿ 1973ರ ಕಲಂ 144(3) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರು ಗುಂಪು ಕಟ್ಟಿಕೊಂಡು ಓಡಾಡುತ್ತಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬಂದಿದೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೈಲನರಸಾಪುರ ಗ್ರಾಮದ ಎಲ್ಲ ಕುಟುಂಬಗಳನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು, ಮನೆ ಮತ್ತು ಗ್ರಾಮದಿಂದ ಹೊರಗೆ ಬಾರದಂತೆ ಹಾಗೂ ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಒಂದು ರಿಸರ್ವ್ ಪೊಲೀಸ್ ಪಡೆಯ ವಾಹನವು ಗ್ರಾಮದಲ್ಲಿ ಗಸ್ತು ತಿರುಗಲಿದೆ. ಲಾಕ್‍ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬೈಲನರಸಾಪುರದ 35 ವರ್ಷದ ವ್ಯಕ್ತಿ ಹಾಗೂ ಅವನ 11 ವರ್ಷದ ಮಗಳಲ್ಲಿ ಕೊರೋನ ವೈರಾಣು ಸೋಂಕು ದೃಢಪಟ್ಟಿದೆ. ಈ 35 ವರ್ಷದ ವ್ಯಕ್ತಿಯು ಪ್ರಕರಣ ಸಂಖ್ಯೆ 169ರ ವ್ಯಕ್ತಿಯ ಸಹೋದರನಾಗಿದ್ದು, ಪ್ರಸ್ತುತ ತಂದೆ ಮತ್ತು ಮಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಐದು ವ್ಯಕಿಗಳಲ್ಲಿ ಕೊರೋನ ವೈರಾಣು ಸೋಂಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಕೇರಳ ರಾಜ್ಯದ ನಿವಾಸಿ ಹಾಗೂ ಉಳಿದ ನಾಲ್ಕು ಜನ ಬೈಲನರಸಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News