ಬೆಂಗಳೂರಿನ ವೈದ್ಯರೊಬ್ಬರಿಗೆ ಕೊರೋನ ದೃಢ
ಬೆಂಗಳೂರು, ಎ.12: ಬೆಂಗಳೂರಿನ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನ ಸೊಂಕು ತಗುಲಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ವೈದ್ಯರಿಗೆ ಕೊರೋನ ಸೊಂಕು ತಗುಲಿದ ಎರಡನೇ ಪ್ರಕರಣ ಇದಾಗಿದೆ. ಶನಿವಾರ ಪತ್ತೆಯಾದ ಕೊರೋನ ಪಾಸಿಟಿವ್ ಪ್ರಕರಣಗಳಲ್ಲಿ ಈ ವೈದ್ಯರೂ ಒಬ್ಬರು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಮಾಹಿತಿ ನೀಡಿದ್ದಾರೆ.
ಕೊರೋನ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ವೈದ್ಯರಿಗೆ ಸೋಂಕು ಹರಡಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರನ್ನ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಅವರು ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯನ್ನು ಮುಂದಿನ ಆದೇಶದವರೆಗೂ ಬಂದ್ ಮಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ವೈದ್ಯರ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಸ್ಪತ್ರೆಯ 10 ಸಿಬ್ಬಂದಿಯನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ವೈದ್ಯರು ಈಗಾಗಲೇ ಬಹುತೇಕ ಜನರಿಗೆ ಚಿಕಿತ್ಸೆ ನೀಡಿದ್ದು, ಅವರ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ವೈದ್ಯರು, ವಾರದ ಹಿಂದೆ ಜ್ವರ ಎಂದು ಆಸ್ಪತ್ರೆಗೆ ಬಂದಿದ್ದ 42 ವರ್ಷದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು. ಅವರಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವೈದ್ಯರಿಗೆ ಕೊರೋನ ತಗುಲಿರುವುದು ರಾಜ್ಯದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಮಾರ್ಚ್ 17 ರಂದು ಕಲಬರಗಿಯ 63 ವರ್ಷದ ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು.