ಅಸಂಘಟಿತ ಕಾರ್ಮಿಕರನ್ನು ಕಾಪಾಡಿ: ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಿಎಸ್ಪಿ ನಿಯೋಗ

Update: 2020-04-12 18:05 GMT

ಬೆಂಗಳೂರು, ಎ.12: ಲಾಕ್‍ಡೌನ್‍ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರ ವಸತಿ, ಊಟ, ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ತುರ್ತು ಬಗೆಹರಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಎಸ್ಪಿ ನಾಯಕರು ಮನವಿ ಪತ್ರ ಸಲ್ಲಿಸಿದರು.

ನಗರದ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ರಾಜ್ಯ ಉಪಾಧ್ಯಕ್ಷ ಆರ್.ಮುನಿಯಪ್ಪ ಸೇರಿದಂತೆ ಪ್ರಮುಖರು ಮನವಿ ಪತ್ರ ಸಲ್ಲಿಸಿ, ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾರಸಂದ್ರ ಮುನಿಯಪ್ಪ, ರಾಜ್ಯದ ಕಟ್ಟಡ ಕಾರ್ಮಿಕರನ್ನು ಗುರುತಿಸಲು ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಇತರ ಸಾಮಾಜಿಕ ಸಂಘಟನೆಗಳನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಬೇಕು. ತುರ್ತಾಗಿ ಪ್ರತಿಯೊಬ್ಬರಿಗೂ ಊಟ ಮತ್ತು ವಸತಿ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಸೌಲಭ್ಯಕ್ಕಾಗಿ ಇರುವ ನಿಧಿಯಿಂದ ಪ್ರತಿಯೊಬ್ಬ ಕಾರ್ಮಿಕನ ಖಾತೆಗೆ ತಲಾ ಮಾಸಿಕ 10 ಸಾವಿರ ರೂ. ವರ್ಗಾವಣೆ ಮಾಡಬೇಕು ಎಂದ ಅವರು, ಪೌರ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರು ಕೆಲಸದಲ್ಲಿ ನಿರತರಾಗಿರುವ ಅವರಿಗೆ ಕೋರೋನ ವೈರಸ್ ಸೋಂಕು ತಗಲುವ ಅಪಾಯ ಇದೆ. ಆದ್ದರಿಂದ 50 ಲಕ್ಷ ರೂ.ಗಳ ಜೀವವಿಮೆ ಮೀಸಲಿಡಬೇಕೆಂದು ಒತ್ತಾಯಿಸಿದರು.

25 ಲಕ್ಷ ಪರಿಹಾರ: ಲಾಕ್‍ಡೌನ್ ಹಿನ್ನೆಲೆ ಕಾಲ್ನಡಿಗೆ ಮೂಲಕವೇ ಹೊರಟು ಮೃತರಾದ ಗಂಗಮ್ಮ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರಕಾರ ಈ ಕೂಡಲೇ ಘೋಷಣೆ ಮಾಡಬೇಕು ಎಂದು ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ಕೋಮು ದ್ವೇಷ: ಕ್ರಮ ಕೈಗೊಳ್ಳಿ

ಕೊರೋನ ವೈರಸ್ ವಿರುದ್ಧ ಪ್ರತಿಯೊಬ್ಬರು ಹೋರಾಟ ನಡೆಸುತ್ತಿರುವ ಪರಿಸ್ಥಿತಿಯಲ್ಲಿ ಕೋಮು ದ್ವೇಷ ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹರಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

-ಮಾರಸಂದ್ರ ಮುನಿಯಪ್ಪ, ಬಿಎಸ್ಪಿ, ರಾಜ್ಯ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News