ಅಂಬೇಡ್ಕರ್ ಜಯಂತಿ: ಮುಖ್ಯಮಂತ್ರಿಯಿಂದ ಗೌರವ ನಮನ

Update: 2020-04-14 09:23 GMT

ಬೆಂಗಳೂರು, ಎ.14: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟ ಯುವ ಜನಾಂಗಕ್ಕೆ ಸ್ಫೂರ್ತಿಯಾಗಬೇಕು. ಯುವಜನತೆ ಅಂಬೇಡ್ಕರ್ ಅವರ  ಆದರ್ಶ ಹಾಗೂ ಚಿಂತನೆಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ. 

ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅವರ 129ನೇ ಜನ್ಮ ದಿನಾಚಣೆಯ ಅಂಗವಾಗಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರದು ಬಹುಮುಖಿ ಸಾಮರ್ಥ್ಯದ ಅಸಾಧಾರಣ ವ್ಯಕ್ತಿತ್ವ. ಶ್ರೇಷ್ಠ ಆರ್ಥಿಕ ತಜ್ಞ. ಸಾಮಾಜಿಕ ಪರಿವರ್ತನೆಯ ಹರಿಕಾರ, ಸಮಾನತೆಯ ಹರಿಕಾರ. ತಳ ಸಮುದಾಯಗಳ ವಿಮೋಚಕಾಗಿದ್ದಾರೆ. ಭಾರತ ಸಂವಿಧಾನದ ಉದಾರವಾದಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರದ ಚಿಂತಕರಲ್ಲಿ ಪ್ರಮುಖ ಹೆಸರು ಇವರದ್ದಾಗಿದೆ ಎಂದರು.

ಎಲ್ಲ ಬಗೆಯ ತಾರತಮ್ಯಗಳನ್ನು ಇನ್ನಿಲ್ಲವಾಗಿಸುವುದು ಮತ್ತು ಜ್ಯಾತ್ಯತೀತ ಭಾರತ ನಿರ್ಮಾಣ ಮಾಡುವುದು ಅವರ ಕನಸು ಆಗಿತ್ತು. ದಮನಿತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೆಗೂ  ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕರಾಗಿದ್ದಾರೆ ಎಂದರು. 

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಗೃಹಸಚಿವ ಬಸವರಾಜ್ ಬೊಮ್ಮಾಯಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ  ಗೋಪಾಲಯ್ಯ,  ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಿ.ಎಸ್.ವೀರಯ್ಯ, ಮಾಜಿ ಸಚಿವ ಆಂಜನೇಯ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ  ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 

 ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಟಿ.ಎಂ.ವಿಜಯ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ  ಆರ್.ಎಸ್.ಪೆದ್ದಪ್ಪಯ್ಯ, ಎಸ್‍ಸಿಪಿ ಮತ್ತು ಟಿಎಸ್‍ಪಿಯ ಯೋಜನೆಯ ಸಲಹೆಗಾರ ಇ.ವೆಂಕಟಯ್ಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News