ಬೆಂಗಳೂರು: ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪ; ರೌಡಿ ಶೀಟರ್ ಬಂಧನ

Update: 2020-04-15 13:14 GMT

ಬೆಂಗಳೂರು, ಎ.15: ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಹಣ ಮತ್ತು ಚಿನ್ನಾಭರಣ ದೋಚಿದ ಆರೋಪದಡಿ ರೌಡಿಯನ್ನು ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಧನುಷ್(26) ಬಂಧಿತ ಆರೋಪಿಯಾಗಿದ್ದು, ಈತ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣದಡಿ ರೌಡಿಪಟ್ಟಿಯಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

17 ವರ್ಷದ ಬಾಲಕಿಯನ್ನು ಅಭಿಷೇಕ್ ಗೌಡ ಎಂದು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿ ಮಾಡುವುದಾಗಿ ನಂಬಿಸಿ, ಆಕೆಯಿಂದ ಹಣ ಮತ್ತು ಚಿನ್ನದ ಒಡವೆಗಳನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದ. ನಂತರ ಆಕೆ ಚಿನ್ನಾಭರಣ ವಾಪಸ್ ನೀಡುವಂತೆ ಕೇಳಿದಾಗ, ಹೊಟೇಲ್‍ವೊಂದಕ್ಕೆ ಕರೆದ್ಯೊಯ್ದು ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಸುಲಿಗೆ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

50 ಮಹಿಳೆಯರೊಂದಿಗೆ ಸಂಪರ್ಕ: ಆರೋಪಿಯು ಫೇಸ್‍ಬುಕ್‍ನಲ್ಲಿ ಅಭಿಷೇಕ್‍ಗೌಡ ಎಂಬ ಹೆಸರಿನ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ಅಮಾಯಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸಗಳಿಸಿ, ಪ್ರೀತಿಸುವಂತೆ ನಾಟಕವಾಡಿ, ದೈಹಿಕ ಸಂಪರ್ಕ ಬೆಳೆಸುವ ಹವ್ಯಾಸವುಳ್ಳವನಾಗಿದ್ದಾನೆ. ಆರೋಪಿಯು ತೆರೆದಿರುವ ನಕಲಿ ಫೇಸ್‍ಬುಕ್ ಖಾತೆಯಾದ ಅಭಿಷೇಕ್‍ಗೌಡ ಎಂಬ ಹೆಸರಿನ ಖಾತೆಯಿಂದ ಸುಮಾರು 2,314 ಜನ ಮಹಿಳೆಯರನ್ನು ಫೇಸ್‍ಬುಕ್ ಫ್ರೆಂಡ್ ಮಾಡಿಕೊಂಡು ನಂತರ ಅವರಿಗೆ ಮೆಸೇಜ್ ಮಾಡಿ ಅವರ ಮೊಬೈಲ್ ನಂಬರ್ ಪಡೆದು ಸುಮಾರು 50 ಮಹಿಳೆಯರಿಗೆ ಪ್ರೀತಿಸುವ ನಾಟಕವಾಡಿ, ದೈಹಿಕ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ನಂದಿನಿ ಲೇಔಟ್ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News