ಮದ್ರಸಗಳ ವಿರುದ್ಧದ ಕುಟುಕು ಕಾರ್ಯಾಚರಣೆ: ಇಂಡಿಯಾ ಟುಡೇ ಹೇಳದ ಸತ್ಯಗಳು

Update: 2020-04-15 16:32 GMT

Photo: Twitter(@rahulkanwal)

ಈ ಲೇಖನ ಮೊದಲು newslaundry.com ನಲ್ಲಿ ಪ್ರಕಟವಾಗಿತ್ತು

ಏಪ್ರಿಲ್ 10ರಂದು ಇಂಡಿಯಾ ಟುಡೇ ಟಿವಿ, ಸುದ್ದಿ ನಿರ್ದೇಶಕ ರಾಹುಲ್ ಕಂವಲ್ ನಿರೂಪಣೆಯ ಪ್ರೈಮ್‍ಟೈಮ್ ಕಾರ್ಯಕ್ರಮವಾದ ನ್ಯೂಸ್‍ಟ್ರ್ಯಾಕ್‍ನಲ್ಲಿ “ವಿಶೇಷ ಶೋಧನೆ” ವರದಿಯನ್ನು ಪ್ರಸಾರ ಮಾಡಿತ್ತು.

ಮದ್ರಸ ಹಾಟ್‍ಸ್ಪಾಟ್ ಹೆಸರಿನಲ್ಲಿ ಮಂದನಪುರ ಖಾದರ್ ನ ಮದ್ರಸಾ ದಾರುಲ್ ಉಲೂಮ್ ಉಸ್ಮಾನಿಯಾ, ಮದ್ರಸ ಇಸ್ಲಾಹುಲ್ ಮುಮಿನೀರ್ ಹಾಗೂ ಗ್ರೇಟರ್ ನೋಯ್ಡಾದ ಮದ್ರಸಾ ಜಾಮಿಯಾ ಮೊಹ್ಮದಿಯಾ ಹಲ್ದೋನಿ ಹೀಗೆ ರಾಷ್ಟ್ರ ರಾಜಧಾನಿಯ ಮೂರು ಮದರಸಗಳ ಉಸ್ತುವಾರಿ ಹೊಂದಿರುವವರ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸಿತ್ತು. 

ರಾಷ್ಟ್ರವ್ಯಾಪಿ ಲಾಕ್‍ಡೌನ್ ಇದ್ದರೂ ಮದ್ರಸಗಳಲ್ಲಿ ವಿದ್ಯಾರ್ಥಿಗಳು ವಾಸ್ತವ್ಯ ಇದ್ದಾರೆ ಎಂದು ವರದಿಯಲ್ಲಿ ತೋರಿಸಲಾಗಿತ್ತು. ಇವುಗಳಿಗೆ ವಿನಾಯ್ತಿ ನೀಡಲು ಪೊಲೀಸರಿಗೆ ಲಂಚ ನೀಡಿದ್ದನ್ನು ಶಿಕ್ಷಕರು ಒಪ್ಪಿಕೊಂಡಿದ್ದಾರೆ ಎಂದೂ ವಿವರಿಸಲಾಗಿತ್ತು.

ಇಂಡಿಯಾ ಟುಡೇ ಸಿದ್ಧಾಂತ: ಮೂರು ಮದ್ರಸಗಳ ಉಸ್ತುವಾರಿ ಹೊಂದಿರುವವರು ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳನ್ನು ಉಳಿಸಿಕೊಂಡು, ಲಾಕ್‍ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ವಿದ್ಯಾರ್ಥಿಗಳನ್ನು ಪೊಲೀಸರಿಂದ ಹುದುಗಿಸಿದ್ದಾರೆ. ಮಕ್ಕಳಿಗೆ ಅಪಾಯವಿದೆ. ಮದ್ರಸಗಳ ಉಸ್ತುವಾರಿ ಹೊಂದಿರುವವರು ತಬ್ಲೀಗಿ ಜಮಾಅತ್ ಜತೆ ಸಂಪರ್ಕ ಹೊಂದಿದ್ದಾರೆ ಎನ್ನುವುದು ಚಾನಲ್‍ನ ಪ್ರತಿಪಾದನೆಯಾಗಿತ್ತು. ದೆಹಲಿಯ ನಿಝಾಮುದ್ದೀನ್‍ನಲ್ಲಿ ನಡೆದ ತಬ್ಲೀಗಿ ಸಮಾವೇಶದಿಂದಾಗಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚಿವೆ ಎಂದು ಭಾರತೀಯ ಮಾಧ್ಯಮಗಳು ದೂರಿವೆ.

ಕಂವಲ್ ಕುಟುಕು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾದ ಮೂವರ ಬಳಿ ಹಾಗೂ ದೆಹಲಿ ಪೊಲೀಸ್ ಅಧಿಕಾರಿಗಳ ಬಳಿ newslaundry.com ಚರ್ಚಿಸಿ ಸತ್ಯಾಂಶ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಮದ್ರಸ ಇಸ್ಲಾಹುಲ್ ಮುಮಿನೀರ್ ನ ಮೊಹ್ಮದ್ ಜಬೀರ್ ಖಾಸ್ಮಿ ಮತ್ತು ಮದ್ರಸ ಜಾಮಿಯಾ ಮೊಹ್ಮದಿಯಾ ಹಲ್ದೋನಿಯ ಮುಫ್ತಿ ಮೊಹ್ಮದ್ ಶೇಖ್ ಅವರು ಮಾತನಾಡಿದ್ದನ್ನು ದೃಢಪಡಿಸಿದರು. ಆದರೆ ದಾರುಲ್ ಉಲೂಮ್ ಉಸ್ಮಾನಿಯಾದ ಅಬ್ದುಲ್ ಹಫೀಜ್ ಮಾಧ್ಯಮದ ಭೀತಿಯಿಂದ ಹಾಗೂ ಅವರ ಸುಪರ್ದಿನಲ್ಲಿದ್ದ ವಿದ್ಯಾರ್ಥಿಗಳ ಬಗೆಗಿನ ಭಯದಿಂದ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದ್ದರು.

ಇಂಡಿಯಾ ಟುಡೇಯ “ತನಿಖೆ”ಯ ಸತ್ಯಾಸತ್ಯತೆಯನ್ನು ಇಲ್ಲಿ ಪರಿಶೀಲಿಸೋಣ

ಲಾಕ್‍ಡೌನ್ ಅವಧಿಯಲ್ಲಿ ಮದ್ರಸಗಳಲ್ಲಿ ಮಕ್ಕಳು ಏಕೆ ವಾಸ್ತವ್ಯ ಇದ್ದರು? ಅವರು ಲಾಕ್‍ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದರೇ?
ಕಂವಲ್ ಅವರ ಕುಟುಕು ಕಾರ್ಯಾಚರಣೆ ಮತ್ತು ಅವರ ಸುದೀರ್ಘ ವಿವರಣೆಯಲ್ಲಿ ಉತ್ತರಿಸದ ಒಂದು ಪ್ರಮುಖ ಪ್ರಶ್ನೆಯೆಂದರೆ, ಮದ್ರಸಗಳಲ್ಲಿ ವಾಸ್ತವ್ಯ ಇದ್ದ ಮಕ್ಕಳು ಎಲ್ಲಿಯವರು?

ಜಬೀರ್ ಹಾಗೂ ಶೇಖ್ ಅವರು newslaundry.comಗೆ ತಿಳಿಸಿದಂತೆ ಆ ವಿದ್ಯಾರ್ಥಿಗಳು ಬಿಹಾರದವರು. ಇಂಡಿಯಾ ಟುಡೇ ಗಮನ ಹರಿಸದ ಇನ್ನೊಂದು ಅಂಶವೆಂದರೆ, ಲಾಕ್‍ಡೌನ್ ಜಾರಿಯಾದ ಕಾರಣ ಈ ಮಕ್ಕಳು ಮನೆಗಳಿಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ ಎನ್ನುವುದು.

ಈ ವಿದ್ಯಾರ್ಥಿಗಳು ಏಪ್ರಿಲ್ 11ಕ್ಕೆ ಮನೆಗಳಿಗೆ ವಾಪಸ್ಸಾಗಬೇಕಿತ್ತು. ಅವರ ರೈಲು ಟಿಕೆಟ್‍ಗಳನ್ನೂ ಕಾಯ್ದಿರಿಸಲಾಗಿತ್ತು. ಆದರೆ ಲಾಕ್‍ಡೌನ್ ಕಾರಣದಿಂದ ಅವರು ಹೋಗಲು ಸಾಧ್ಯವಾಗಲಿಲ್ಲ ಎಂದು ಜಬೀರ್ ವಿವರಿಸುತ್ತಾರೆ.

ಸ್ವತಃ ಬಿಹಾರದವರಾದ ಶೇಖ್ ಹೇಳುವಂತೆ, ಏಪ್ರಿಲ್ 1ರಿಂದ ಶಾಲೆಗೆ ರಜೆ ನೀಡಿದಾಗ, ಪ್ರಯಾಣಕ್ಕೆ ನಿರ್ಬಂಧ ಇದ್ದರೆ ಈ ಮಕ್ಕಳು ಹೇಗೆ ಮನೆಗಳಿಗೆ ಹಿಂದಿರುಗಲು ಸಾಧ್ಯ?
ಮಾರ್ಚ್ 21ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳು, ಕೊರೋನ ವೈರಸ್ ತಹಬಂದಿಗೆ ಬರುವವರೆಗೂ ಕ್ಯಾಂಪಸ್‍ನಲ್ಲೇ ವಾಸ್ತವ್ಯ ಇರಲಿ ಎಂದು ಸೂಚಿಸಿತ್ತು. ಮದ್ರಸಗಳು ಶಿಕ್ಷಣ ಸಂಸ್ಥೆಗಳಾಗಿರುವುದರಿಂದ ಈ ಸೂಚನೆ ಅವುಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ಜಬೀರ್ ಹಾಗೂ ಶೇಖ್ ಅವರು ಲಾಕ್‍ಡೌನ್ ಮಾರ್ಗಸೂಚಿಯನ್ನು ಅವರು ಉಲ್ಲಂಘಿಸಿದಂತಾಗುವುದಿಲ್ಲ ಹಾಗೂ ಅದನ್ನು ಪಾಲಿಸಿದಂತಾಗುತ್ತದೆ.

ನ್ಯೂಸ್‍ಲಾಂಡ್ರಿ, ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಾಫರ್ ಉಲ್ ಇಸ್ಲಾಂ ಖಾನ್ ಅವರ ಜತೆಗೂ ಮಾತನಾಡಿದೆ. ಬಹುತೇಕ ಮಕ್ಕಳು ಮದ್ರಸಗಳಿಗೆ ದೆಹಲಿಯ ಹೊರಗಡೆಯಿಂದ ಹಾಗೂ ಅವರ ಬಡಕುಟುಂಬಗಳಿಂದ ಬರುವವರು. ಶಿಕ್ಷಕರೇ ಅವರ ಯೋಗಕ್ಷೇಮದ ಹೊಣೆ ಹೊಂದಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ಮದ್ರಸಗಳು ಮಕ್ಕಳನ್ನು ಹುದುಗಿಸಿ ಇಟ್ಟಿದ್ದವೇ? ಉಸ್ತುವಾರಿ ಹೊಂದಿರುವವರು ತಬ್ಲೀಘಿ ಜಮಾ ಅತ್ ಜತೆ ಸಂಪರ್ಕ ಹೊಂದಿದ್ದರೇ ಅಥವಾ ನಿಝಾಮುದ್ದೀನ್ ಸಮಾರಂಭದಲ್ಲಿ ಭಾಗವಹಿಸಿದ್ದರೇ? ಮಕ್ಕಳು ಸಾಮಾಜಿಕ ಅಂತರ ನಿಯಮ ಪಾಲಿಸುತ್ತಿದ್ದರೇ?
ಎರಡು ಮದ್ರಸಗಳು ದೆಹಲಿ ಆಗ್ನೇಯ ಜಿಲ್ಲೆಯ ಪೊಲೀಸ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವುಗಳ ಅಧಿಕಾರಿಗಳ ಜತೆ newslaundry.com ಮಾತನಾಡಿದಾಗ, ಮಂದನಪುರ ಖಾದರ್‍ನಲ್ಲಿನ ಎರಡು ಮದ್ರಸಗಳು ಮಕ್ಕಳನ್ನು ಬಚ್ಚಿಟ್ಟಿದ್ದವು ಎಂಬ ವರದಿ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಮಾಧ್ಯಮ ಜತೆ ಮಾತನಾಡುವ ಅಧಿಕಾರ ನಮಗಿಲ್ಲ. ಆದ್ದರಿಂದ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂದು ಮನವಿ ಮಾಡಿದರು.

ಏಪ್ರಿಲ್ 2ರಂದು ಎರಡು ಮದ್ರಸಗಳಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಬಗ್ಗೆ ಉಪ ವಿಭಾಗದ ಮ್ಯಾಜಿಸ್ಟ್ರೇಟರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಕುಟುಕು ಕಾರ್ಯಾಚರಣೆ ವರದಿಯಲ್ಲಿ ಪ್ರದರ್ಶಿಸಿದ್ದಕ್ಕಿಂತ ಭಿನ್ನವಾಗಿ, ಜಬೀರ್ ಹಾಗೂ ಶೇಖ್ ಅವರಿಗೆ ತಬ್ಲೀಗಿ ಜಮಾಅತ್ ಜತೆ ಯಾವ ಸಂಪರ್ಕವೂ ಇಲ್ಲ ಹಾಗೂ ನಿಝಾಮುದ್ದೀನ್ ಕೇಂದ್ರ ಕಚೇರಿಗೆ ಅವರು ಭೇಟಿಯನ್ನೂ ನೀಡಿಲ್ಲ.

ಗ್ರೇಟರ್ ನೋಯ್ಡಾ ಮದ್ರಸದ ಕಥೆ ಏನು?
'ಇಂಡಿಯಾ ಟಿವಿ' ಏಪ್ರಿಲ್ 10ರಂದು ಇದೇ ಮದರಸ ಹಾಗೂ ಉಸ್ತುವಾರಿ ಹೊಂದಿದವರ ಬಗ್ಗೆ ವರದಿ ಪ್ರಸಾರ ಮಾಡಿತು. ಬಿಹಾರದ 24 ವಿದ್ಯಾರ್ಥಿಗಳಿರುವ ಈ ಮದ್ರಸ ಹೇಗೆ ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ಮಾದರಿಯಾಗಿದೆ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿತ್ತು.

Full View

ಮದ್ರಸಕ್ಕೆ ಭೇಟಿ ನೀಡಿದ ವೈದ್ಯರೊಬ್ಬರು, 'ಇಂಡಿಯಾ ಟಿವಿ' ಜತೆ ಮಾತನಾಡಿ ಯಾವ ವಿದ್ಯಾರ್ಥಿಗಳಿಗೂ ಕೋವಿಡ್-19 ಸೋಂಕು ಇಲ್ಲ ಎಂದು ದೃಢಪಡಿಸಿದ್ದರು. ಇಂಡಿಯಾ ಟುಡೇಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿದ್ದಾರೆ ಎಂದು ಹೆಸರಿಸಿದ ಶೇಖ್ ಅವರು, ಹೇಗೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಮಾದರಿಯಾಗಿದ್ದಾರೆ ಎನ್ನುವುದನ್ನು ಇಂಡಿಯಾ ಟಿವಿ ಪ್ರದರ್ಶಿಸಿತ್ತು.

“ಅಲ್ಲಾಹನ ಕೃಪೆಯಿಂದ ನಮಗೆ ಸಾಕಷ್ಟು ಸ್ಥಳಾವಕಾಶ ಇದೆ” ಎಂದು ಶೇಖ್ newslaundry.comಗೆ ತಿಳಿಸಿದರು. 500 ಗಜ ವಿಸ್ತೀರ್ಣದಲ್ಲಿ ಮದ್ರಸ ಇದ್ದು, 4456 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂದು ವಿವರಿಸಿದ್ದರು.

ತಬ್ಲೀಗಿ ಜಮಾಅತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಕೊರೋನಾ ವೈರಸ್ ಸೋಂಕನ್ನು ನಿಭಾಯಿಸಲು ಮದ್ರಸ ಹೇಗೆ ಸಜ್ಜಾಗಿದೆ ಎನ್ನುವುದನ್ನು ವಿವರಿಸಿದ ಇಂಡಿಯಾ ಟಿವಿ, ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವ ಹಾಗೂ ಸ್ಯಾನಿಟೈಸರ್ ಹಾಗೂ ಸೋಪು ಬಳಸುತ್ತಿರುವ ದೃಶ್ಯ ಪ್ರಸಾರ ಮಾಡಿತ್ತು.
ಅಂತೆಯೇ ಮದ್ರಸ ಇಸ್ಲಾಹುಲ್ ಮುಮಿನೀರ್ ಕ್ಯಾಂಪಸ್ ಮೂರು ಅಂತಸ್ತು ಹೊಂದಿದೆ ಎಂದು ಜಬೀರ್ ವಿವರಿಸಿದರು. ನಿಗದಿತ ಅಂತರ ಕಾಪಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದರು.

ತಬ್ಲೀಗಿ ಜಮಾಅತ್ ಜತೆ ಯಾವುದೇ ಸಂಪರ್ಕ ಇದೆಯೇ ಅಥವಾ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದೀರಾ ಎಂಬ ಪ್ರಶ್ನೆಯನ್ನು ನ್ಯೂಸ್‍ಲಾಂಡ್ರಿ, ಜಬೀರ್ ಹಾಗೂ ಶೇಖ್ ಇಬ್ಬರಿಗೂ ಕೇಳಿತ್ತು.

ತಬ್ಲೀಗಿ ಜಮಾ ಅತ್ ಜತೆಗಿನ ಸಂಪರ್ಕವನ್ನು ಶೇಖ್ ನಿರಾಕರಿಸಿದರೆ, “ನಾನು ಟಾಫಿ ಹಾಗೂ ಕರ್ಚೀಫ್ ಖರೀದಿಗೆ ನಿಜಾಮುದದೀನ್‍ಗೆ ಹೋಗುತ್ತೇನೆ. ಆದರೆ ಜಮಾ ಅತ್ ಜತೆ ಯಾವ ಸಂಪರ್ಕವೂ ಇಲ್ಲ” ಎಂದು ಜಬೀರ್ ಸ್ಪಷ್ಟಪಡಿಸಿದರು.

ಇಂಡಿಯಾ ಟುಡೇ ಕುಟುಕು ವರದಿಯ ಪ್ರಕಾರ ವಿದ್ಯಾರ್ಥಿಗಳ ಜತೆ ಜಬೀರ್, ಜಮಾ ಅತ್‍ನ ಕೇಂದ್ರ ಕಚೇರಿ ಎನಿಸಿದ ಮರ್ಕಝ್‍ಗೆ ಭೇಟಿ ನೀಡಿದ್ದರು. ಯಾಕೆ ಹಾಗೆ ಹೇಳಿದ್ದರು? ಜಬೀರ್ ಆಪಾದಿಸುವಂತೆ, “ಬಹುಶಃ ಆಡಿಯೊ ಎಡಿಟ್ ಮಾಡಿ” ಹಾಗೆ ಪ್ರಸಾರ ಮಾಡಿದ್ದಾರೆ.

ಇದಕ್ಕೆ ಕುಟುಕು ಕಾರ್ಯಾಚರಣೆ ಅಗತ್ಯವಿತ್ತೇ?
ಸುದ್ದಿಯ ರಹಸ್ಯ ಬೇಧಿಸುವ ಸಲುವಾಗಿ ಕುಟುಕು ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಸುದ್ದಿ ಕ್ಷೇತ್ರದ ವೃತ್ತಿಪರರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಅವುಗಳ ಕ್ಷಮತೆ ಮತ್ತು ನೈತಿಕತೆ ಬಗ್ಗೆಯೂ ಅಭಿಪ್ರಾಯಭೇಧವಿದೆ. ಅಧಿಕಾರದಲ್ಲಿರುವವರ ಹುಳುಕು ಹೊರಹಾಕಲು ಇದು ಅಗತ್ಯ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅದು ಅನಿವಾರ್ಯ ಎನ್ನುವುದು ಅದನ್ನು ಬೆಂಬಲಿಸುವವರ ವಾದ.
ಪ್ರತಿ ಕುಟುಕು ಕಾರ್ಯಾಚರಣೆ ಕೂಡಾ ಮಾಧ್ಯಮ ಸಂಸ್ಥೆಯ ಸಂಪಾದಕ ಹಾಗೂ ವರದಿಗಾರರಿಗೆ ಪ್ರಮುಖ ಪ್ರಶ್ನೆಗಳನ್ನು ಮುಂದಿಡುತ್ತದೆ. ಮೊದಲನೆಯದಾಗಿ, ಅಂಥ ಮಹತ್ವದ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಯನ್ನು ರಹಸ್ಯವಾಗಿ ಚಿತ್ರೀಕರಿಸಬೇಕೇ ಅಥವಾ ಅದು ಹಾಗೆಯೇ ಹೊರಗೆಬರುವುದಿಲ್ಲವೇ? ಆ ಸುದ್ದಿಯ ವಿಷಯ ಅಷ್ಟು ಶಕ್ತಿಶಾಲಿಯಾಗಿದ್ದರೆ, ಅದನ್ನು ಬಹಿರಂಗಪಡಿಸುವ ವಿಧಾನ ಕುಟುಕು ಕಾರ್ಯಾಚರಣೆ ಮಾತ್ರವೇ?
ಇಂಡಿಯಾ ಟುಡೇ ವರದಿಗಾರ ಜಬೀರ್ ಹಾಗೂ ಶೇಖ್ ನೀಡಿದ ಸುದ್ದಿಗಾಗಿ ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ಜಬೀರ್ ಹೇಳುವಂತೆ, “ಅವರ ಹೆಸರು ಅಮೀರ್. ನಮ್ಮಂತೆ ಖುರ್ತಾ ಧರಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಕ್ಕಳಿಗೆ ನೆರವಾಗುವವರಂತೆ ಸೋಗು ಹಾಕಿಕೊಂಡು ಬಂದಿದ್ದರು”

ಇಂಡಿಯಾ ಟುಡೇಯ ಈ ತನಿಖೆ ಟ್ವಿಟ್ಟರ್‍ನಲ್ಲಿ ಅವರಿಗೇ ತಿರುಗುಬಾಣವಾಗಿದೆ. ಇದು ಸಾಂಕ್ರಾಮಿಕವನ್ನು ಕೋಮುವಿಚಾರವಾಗಿಸುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ರಾಹುಲ್ ಕಂವಲ್ ತಮ್ಮನ್ನು ಸಮರ್ಥಿಸಿಕೊಂಡಿದ್ದರು.

ಟಿವಿ ಚಾನಲ್ ಮದ್ರಸ ಆವರಣಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ತನ್ನ ಪ್ರೇಕ್ಷಕರಿಗೇ ಬಿಟ್ಟುಬಿಡಲಿಲ್ಲ. ಬುದ್ಧೀಗೇಡಿ ಮೌಲ್ವಿಗಳು ಉದ್ದೇಶಪೂರ್ವಕವಾಗಿ ಮದ್ರಸಗಳಲ್ಲಿ ವಿದ್ಯಾರ್ಥಿಗಳನ್ನು ಉಳಿಸಿಕೊಂಡಿದ್ದಾರೆ. ಅವರ ಜೀವಕ್ಕೆ ಅಪಾಯವಿದ್ದು, ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇಷ್ಟು ಮಾತ್ರವಲ್ಲದೇ, ಸುದ್ದಿಯಲ್ಲಿ ಬಹಳಷ್ಟು ಮಾಹಿತಿಗಳು ತಪ್ಪಾಗಿದ್ದವು. ಇದು ವೀಕ್ಷಕರಿಗೆ ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ವೀಕ್ಷಕರನ್ನು ತಪ್ಪುದಾರಿಗೆ ಎಳೆಯುವ ಸುದ್ದಿಯೇ ಆಗಿತ್ತು.

ವಿಡಿಯೊ ಪ್ರಸಾರವಾಗುವ ಮುನ್ನ ಕಂವಲ್, “ಕೇವಲ ಟಿವಿ ಮಾಧ್ಯಮವಲ್ಲದೇ, ಮುದ್ರಣ ಹಾಗೂ ಡಿಜಿಟಲ್ ಸೇರಿದಂತೆ ಎಲ್ಲ ಮಾಧ್ಯಮಗಳ ಪೈಕಿ ಇದೊಂದೇ ತನಿಖಾ ತಂಡ ಕ್ಷೇತ್ರದಲ್ಲಿದ್ದುಕೊಂಡು, ವಾಸ್ತವವಾಗಿ ಏನು ನಡೆಯುತ್ತಿದೆ ಎನ್ನುವ ಚಿತ್ರಣದ ಒಳನೋಟಗಳನ್ನು ನೀಡುತ್ತಿದೆ” ಎಂದು ಹೇಳಿಕೊಂಡಿದ್ದರು.

ಈ ವರದಿ ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವ ಛಾತಿಯನ್ನು ಕಂವಲ್ ತಂಡ ಹೊಂದಿದೆಯೇ ಹಾಗೂ ಅದರಲ್ಲಿ ಎದ್ದು ಕಾಣುವ ಅಂತರವನ್ನು ಬಗೆಹರಿಸುತ್ತದೆಯೇ

newslaundry.com ರಾಹುಲ್ ಕಂವಲ್ ಅವರಿಗೆ ಪ್ರಶ್ನಾವಳಿಯನ್ನು ಕಳುಹಿಸಿದೆ.

Writer - ಚಿತ್ರಾಂಶು ತಿವಾರಿ

contributor

Editor - ಚಿತ್ರಾಂಶು ತಿವಾರಿ

contributor

Similar News