ಶಂಕಿತ ಕೋವಿಡ್-19 ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೈದ್ಯರು,ಪೊಲೀಸರ ಮೇಲೆ ದಾಳಿ

Update: 2020-04-15 16:34 GMT

ಮೊರಾದಾಬಾದ್,ಎ.15: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ರೋಗಿಯ ನಿಕಟ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ಗಾಗಿ ಕರೆದೊಯ್ಯುತ್ತಿದ್ದ ವೈದ್ಯರು ಮತ್ತು ಪೊಲೀಸರ ಮೇಲೆ ಸ್ಥಳೀಯರು ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಗರದ ನವಾಬಪುರ ಕಾಲನಿಯಲ್ಲಿ ನಡೆದಿದೆ. ಕೆಲವು ಪೊಲೀಸರು ಮತ್ತು ಓರ್ವ ವೈದ್ಯ ಗಾಯಗೊಂಡಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಕಠಿಣವಾದ ರಾಷ್ಟ್ರಿಯ ಸುರಕ್ಷತಾ ಕಾಯ್ದೆಯನ್ನು ಹೇರುವಂತೆ ಹಿಂದೆಯೇ ಆದೇಶಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು,ಆರೋಪಿಗಳ ವಿರುದ್ಧ ಈ ಕಾಯ್ದೆಯಡಿ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿದ್ದರೆ ಅದರ ಮೊತ್ತವನ್ನೂ ಅವರಿಂದ ವಸೂಲು ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರದೇಶದಲ್ಲಿಯ ಕೊರೋನ ವೈರಸ್ ರೋಗಿಯೋರ್ವ ಸಾವನ್ನಪ್ಪಿದ್ದು, ಆತನ ನಿಕಟ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ಗೆಂದು ಆಂಬ್ಯುಲನ್ಸ್‌ಗೆ ಹತ್ತಿಸುತ್ತಿದ್ದಾಗ ಸುಮಾರು 150 ಜನರಿದ್ದ ಜನರ ಗುಂಪು ಕಲ್ಲು ತೂರಾಟ ನಡೆಸಿದೆ. ಪೊಲೀಸ್ ಕಾರ್ ಮತ್ತು ಆ್ಯಂಬುಲನ್ಸ್‌ಗೆ ಹಾನಿಯನ್ನುಂಟು ಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಮೊರಾದಾಬಾದ್‌ನಲ್ಲಿ ಈವರೆಗೆ 19 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News