ಬಮೂಲ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ
ಬೆಂಗಳೂರು, ಎ.15: ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿನವಿಡೀ ಶ್ರಮಿಸುತ್ತಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ವ್ಯಾಪ್ತಿಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಬಮೂಲ್ ಸಂಸ್ಥೆ ವತಿಯಿಂದ ತಲಾ ಮೂರು ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಬೆಂಗಳೂರು ಗ್ರಾಮಂತರ ಪ್ರದೇಶದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಎ.9ರಂದು ಬಮುಲ್(ಬೆಂಗಳೂರು ಸಹಕಾರ ಹಾಲು ಒಕ್ಕೂಟ) ಸಂಸ್ಥೆಗೆ ಪತ್ರ ಬರೆದು, ಕೊರೋನ ನಿಯಂತ್ರಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಬಮೂಲ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ 5 ಸಾವಿರ ರೂ. ಪ್ರೋತ್ಸಾಹಧನ ಕೊಡುವಂತೆ ಮನವಿ ಮಾಡಿದ್ದರು.
ಸಂಸದ ಡಿ.ಕೆ.ಸುರೇಶ್ ಬರೆದ ಪತ್ರದ ಹಿನ್ನೆಲೆಯಲ್ಲಿ ಬಮೂಲ್ ಸಂಸ್ಥೆಯು ನಿರ್ದೇಶಕ ಸಭೆ ನಡೆಸಿ, ಆಶಾ ಕಾರ್ಯಕರ್ತೆಯರ ಅಗತ್ಯ ಸೇವೆಯನ್ನು ಪರಿಗಣಿಸಿ ಮೂರು ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡಲು ಮುಂದಾಗಿದೆ.
ಬಮೂಲ್ ನಿರ್ದೇಶಕ ಮಂಡಳಿಯ ತೀರ್ಮಾನಕ್ಕೆ ಧನ್ಯವಾದ ಆರ್ಪಿಸಿದ ಡಿ.ಕೆ.ಸುರೇಶ್, ಕೊರೋನ ಸೋಂಕಿನಂತಹ ಗಂಭೀರವಾದ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಜನರಿಗೆ ಅರಿವು ಮೂಡಿಸುವುದು ಸೇರಿದಂತೆ ನಾನಾ ಕಾರ್ಯಗಳಲ್ಲಿ ತೊಡಗಿರುವ ಆಶಾ ಕಾರ್ಯಕರ್ತರ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯೆಂದು ತಿಳಿಸಿದ್ದಾರೆ.