46.8 ಲಕ್ಷ ಇ-ಪಾಸ್‍ಗಳ ಅರ್ಜಿಗಳು ತಿರಸ್ಕೃತ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2020-04-15 17:44 GMT

ಬೆಂಗಳೂರು, ಎ.15: ಆನ್‍ಲೈನ್ ಮೂಲಕ ಅನಗತ್ಯ ಕಾರಣಗಳನ್ನು ಉಲ್ಲೇಖಿಸಿ ಇ-ಪಾಸ್‍ಗಾಗಿ ಅರ್ಜಿ ಸಲ್ಲಿಸಿದ್ದ 46.8 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ 1.87 ಲಕ್ಷ ಪಾಸ್‍ಗಳನ್ನು ವಿತರಿಸಲಾಗಿದೆ. ಅವುಗಳನ್ನು ಎ.20 ರವರೆಗೂ ಬಳಕೆ ಮಾಡಬಹುದಾಗಿದೆ. ಆದರೆ, ಪಾಸ್‍ಗಳು ಇರುವವರು ಅನಗತ್ಯವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವೆಡೆ ಪಾಸ್‍ಗಳನ್ನು ಕಲರ್ ಜೆರಾಕ್ಸ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಾಹನ ಜಪ್ತಿ: ನಗರದ 12 ಗಡಿ ಭಾಗಗಳನ್ನು ಸೀಲ್ ಮಾಡಲಾಗಿದೆ. ಎ.20 ರವರೆಗೆ ಸಾರ್ವಜನಿಕರಿಗೆ ಬೆಂಗಳೂರು ಬಿಟ್ಟು ಹೊರ ಹೋಗಲು ಅಥವಾ ನಗರ ಪ್ರವೇಶಿಸಲು ಅವಕಾಶವಿಲ್ಲ. ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಬೇರೆ ಜಿಲ್ಲೆಗೆ ಹೋದರೂ, ಅಲ್ಲಿ ಸಿಕ್ಕಿಬಿದ್ದರೆ ಕಠಿಣ ಕ್ರಮ ವಹಿಸಲಾಗುತ್ತದೆ. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದರು.

ಸರಕು ವಾಹನ, ಹಣ್ಣು, ತರಕಾರಿ, ದಿನಸಿ ಪದಾರ್ಥಗಳು, ಮಾಂಸ ತರುವ ವಾಹನಗಳಿಗೆ ಓಡಾಡಲು ಅವಕಾಶ ನೀಡಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಯಿದ್ದರೂ ಅವರ ಜಿಲ್ಲೆಯಲ್ಲಿಯೇ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಡ್ರೋನ್ ಯಶಸ್ವಿ: ನಗರದಲ್ಲಿ ಈಗಾಗಲೇ 50 ಡ್ರೋನ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಅನಗತ್ಯವಾಗಿ ಓಡಾಡುವ ಜನರನ್ನು ಪತ್ತೆ ಮಾಡಲು ಈ ಡ್ರೋನ್ ಸಹಕಾರಿಯಾಗಿದೆ. ವಾಯುವಿಹಾರಕ್ಕೆ ಬರುವವರು, ಸೈಕಲ್‍ನಲ್ಲಿ ತಿರುಗಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಕು ಪ್ರಾಣಿಗಳನ್ನು ಮನೆ ಸುತ್ತ-ಮುತ್ತ ಕರೆದುಕೊಂಡು ಹೋಗಬಹುದು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News