ಬಿ.ಆರ್.ಶೆಟ್ಟಿ: ಜನಸಂಘದಿಂದ ಜನಪ್ರತಿನಿಧಿ, ಮೆಡಿಕಲ್ ರೆಪ್, ಬಿಲಿಯಾಧಿಪತಿ, ಈಗ ಆರೋಪಿ

Update: 2020-04-16 18:59 GMT

ಉಡುಪಿ: ಉಡುಪಿಯಲ್ಲಿ ಮೆಡಿಕಲ್ ರೆಪ್ ಆಗಿ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ವ್ಯಕ್ತಿಯೊಬ್ಬರು ಇಂದು ತಮ್ಮ ಬುದ್ಧಿಮತ್ತೆ, ಕಠಿಣ ಪರಿಶ್ರಮ ಹಾಗೂ ಅದೃಷ್ಟದ ಬೆಂಬಲದೊಂದಿಗೆ ಕೋಟ್ಯಾಧಿಪತಿಯಾಗಿ ವಿಶ್ವದಲ್ಲೇ ಎಲ್ಲರ ಗಮನ ಸೆಳೆದು, ಇದೀಗ ವಿವಾದಗಳ ಕೇಂದ್ರಬಿಂದುವಾಗಿರುವುದು ಬಿ.ಆರ್. ಶೆಟ್ಟಿ ಅವರ ಬದುಕಿನ ಯಶೋಗಾಥೆಯ ವಿವಿಧ ಮಜಲುಗಳು.

ಜನಸಂಘದಿಂದ ಜನಪ್ರತಿನಿಧಿ 
ಮಣಿಪಾಲದಲ್ಲಿ ಬಿಫಾರ್ಮಾ ಪದವಿ ಪಡೆದು ಮೆಡಿಕಲ್ ರೆಪ್ ಆಗಿದ್ದ ಬಾವಗುತ್ತು ರಘುರಾಮ ಶೆಟ್ಟಿ (1968-73) ಒಂದು ಅವಧಿಗೆ ಉಡುಪಿ ನಗರಸಭೆಯ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿದ್ದ ಡಾ.ವಿ.ಎಸ್.ಆಚಾರ್ಯರ ಜೊತೆ ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದವರು. ಶಂಭು ಶೆಟ್ಟಿ ಹಾಗೂ ಕೂಸಮ್ಮ ಶೆಟ್ಟಿ ದಂಪತಿಗಳ ಪುತ್ರನಾಗಿ 1942ರ ಆ.1ರಂದು ಕಾಪುವಿನಲ್ಲಿ ಜನಿಸಿದ ಬಿ.ಆರ್.ಶೆಟ್ಟಿ, ಬಾಲ್ಯದಿಂದಲೂ ಸಂಘ ಪರಿವಾರದೊಂದಿಗೆ ಸಂಬಂಧವಿರಿಸಿಕೊಂಡವರು. ಅಂದಿನ ಜನಸಂಘ (ಬಿಜೆಪಿಯ ಹಿಂದಿನ ರೂಪ)ದೊಂದಿಗೆ ಸಕ್ರೀಯರಾಗಿ ಗುರುತಿಸಿಕೊಂಡಿದ್ದ ಅವರು, ಜನಸಂಘದಲ್ಲೇ ಸ್ಪರ್ಧಿಸಿ ನಗರಸಭೆಯ ಸದಸ್ಯರಾಗಿ ಚುನಾಯಿತ ರಾದಲ್ಲದೇ, ಮೊದಲ ಅವಧಿಯಲ್ಲೇ ಅದರ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು.

ಬಿಜೆಪಿ, ಸಂಘದ ಜೊತೆ ನಿಕಟ ಬಂಧ 
ಆದರೆ ಅವರ ಸಕ್ರೀಯ ರಾಜಕೀಯ ಜೀವನ 1973ಕ್ಕೆ ಕೊನೆಯಾದರೂ, ಅಂದಿನಿಂದ ಇಂದಿನವರೆಗೂ ಬಿಜೆಪಿ ಹಾಗೂ ಸಂಘ ಪರಿವಾರದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಿ ರಾಷ್ಟ್ರಗಳಿಗೆ ಕರೆಸಿ ಅವರ ಕೈಯಲ್ಲಿ ದೇವಾಲಯವೊಂದನ್ನು ಉದ್ಘಾಟಿಸಿದ್ದ ಬಿ.ಆರ್.ಶೆಟ್ಟಿ, ತಾವು ಪ್ರಧಾನಿಯೊಂದಿಗೆ ಹೊಂದಿದ್ದ ನಿಕಟ ಬಾಂಧ್ಯವವನ್ನು ಜಗತ್ತಿಗೆ ಜಗಜ್ಜಾಹೀರುಗೊಳಿಸಿದ್ದರು. ಕಳೆದ ಲೋಕಸಭಾ ಚುನಾವಣೆಗೆ ಮೊದಲು ಪ್ರಧಾನಿ ಮೋದಿ ನೇತೃತ್ವದ ಸರಕಾರವೇ ಮತ್ತೆ ಬರಬೇಕು ಎಂದು ಆಗ್ರಹಿಸಿ ವಿಡಿಯೋ ಪ್ರಚಾರ ಕೂಡ ನಡೆಸಿದ್ದರು. ಅಲ್ಲದೇ ಅವರು ರಾಜ್ಯ ಹಾಗೂ ರಾಷ್ಟ್ರದ ಹಿರಿಯ ಹಾಗೂ ಪ್ರಭಾವಶಾಲಿ ಬಿಜೆಪಿ ನಾಯಕರೊಂದಿಗೆ ಈಗಲೂ ಉತ್ತಮ ಸಂಬಂಧವನ್ನು ಇರಿಸಿಕೊಂಡಿದ್ದಾರೆ.

ಗಲ್ಫ್ ನಲ್ಲಿ ಬಂತು ಹಣ, ಖ್ಯಾತಿ 
ಬಿ.ಆರ್.ಶೆಟ್ಟಿ 1973ರಲ್ಲಿ ನಗರಸಭೆಯ ಅವಧಿ ಮುಗಿದ ಬಳಿಕ ಅಂದಿನ ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಕೆ.ಪೈ ಅವರಿಂದ ಒಂದು ಲಕ್ಷ ರೂ.ಸಾಲ ಪಡೆದು, ಅಂದಿನ ಕರಾವಳಿಯ ಎಲ್ಲಾ ಯುವಕರು ಮಾಡುವಂತೆ, ಉಜ್ವಲ ಭವಿಷ್ಯವನ್ನು ಹುಡುಕಿಕೊಂಡು ಕೊಲ್ಲಿ ರಾಷ್ಟ್ರಕ್ಕೆ (ಯುಎಇ) ಕುಟುಂಬ ಸಮೇತ ಪ್ರಯಾಣ ಬೆಳೆಸಿದರು.

ಅಲ್ಲೂ ಆರಂಭದ ಎರಡು ವರ್ಷ ತಮ್ಮ ನೆಲೆ ಕಂಡುಕೊಳ್ಳಲು ಹೆಣಗಾಡಿದ ಬಿ.ಆರ್.ಶೆಟ್ಟಿ, ಫಾರ್ಮಸಿಸ್ಟ್ ಆಗಿ ದುಡಿದ ಬಳಿಕ, ವೈದ್ಯೆಯಾಗಿದ್ದ ಪತ್ನಿ ಚಂದ್ರಕುಮಾರಿ ಅವರೊಂದಿಗೆ 1975ರಲ್ಲಿ ನ್ಯೂ ಮೆಡಿಕಲ್ ಸೆಂಟರ್ (ಎನ್‌ಎಂಸಿ)ನ್ನು ಸ್ಥಾಪಿಸಿದ್ದು, ಅವರ ಜೀವನದ ಮಹತ್ವದ ತಿರುವಾಯಿತು. ಅಲ್ಲಿಂದ ಮುಂದೆ ಅವರು ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಕೊಲ್ಲಿ ರಾಷ್ಟ್ರಗಳ ಶ್ರೀಮಂತ ಅನಿವಾಸಿ ಭಾರತೀಯ ಎನಿಸಿಕೊಳ್ಳುವವರೆಗೂ ಅವರು ಬೆಳೆದು ನಿಂತರು.

ಪ್ರಭಾವಿ ಅನಿವಾಸಿ ಭಾರತೀಯ 
ಉದ್ಯಮದಲ್ಲಿ ಯಶಸ್ಸು ಗಳಿಸುತ್ತಾ ಹೋದಂತೆ ಬಿ.ಆರ್ ಶೆಟ್ಟಿ ಅಬುಧಾಬಿ ಮತ್ತು ಒಟ್ಟು ಯುಎಇ ಯ ಸಾಮಾಜಿಕ, ಸಾಂಸ್ಕೃತಿಕ , ಸೇವಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಾ ಬೆಳೆದರು. ಆ ರಾಷ್ಟ್ರದ ಆಡಳಿತಗಾರರ ಜೊತೆ ಅವರಿಗೆ ಅತ್ಯುತ್ತಮ ಬಾಂಧವ್ಯವಿತ್ತು. ಅಲ್ಲಿನ ಉದ್ಯಮ ಹಾಗು ಆಡಳಿತ ವಲಯದಲ್ಲಿ ಅವರಿಗೆ ಬಹಳ ದೊಡ್ಡ ಹೆಸರಿತ್ತು. ಆ ಪ್ರಭಾವದಿಂದ ಅನಿವಾಸಿ ಭಾರತೀಯರಿಗೆ ಅಗತ್ಯ ಬಿದ್ದಾಗ ನೆರವು ನೀಡಲು ಅವರು ಯಾವತ್ತೂ ಲಭ್ಯವಿರುತ್ತಿದ್ದರು ಎಂದು ದೊಡ್ಡ ಸಂಖ್ಯೆಯ ಅನಿವಾಸಿ ಭಾರತೀಯರು ಹೇಳುತ್ತಾರೆ. ಆ ದೇಶದಲ್ಲಿ ವಿವಿಧ ಅನಿವಾಸಿ ಭಾರತೀಯ ಸೇವಾ ಹಾಗು ಸಾಂಸ್ಕೃತಿಕ  ಸಂಘಟನೆಗಳು ಬೆಳೆಯುವಲ್ಲೂ ಅವರ ಪ್ರೋತ್ಸಾಹ ಬಹಳ ದೊಡ್ಡದಿತ್ತು.  

ಭಾರತದಲ್ಲಿ ಭಾರೀ ಬಂಡವಾಳ ಹೂಡುವ ಘೋಷಣೆ 
ವೈದ್ಯಕೀಯ ಕ್ಷೇತ್ರದಲ್ಲಿ ಅವರು ವಿಶ್ವದಲ್ಲೇ ಮುಂಚೂಣಿಯ ಸಾಧಕರಾಗಿದ್ದಾರೆ. ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಐದು ಬಿಲಿಯನ್ ಡಾಲರ್ ನಿಧಿಯನ್ನು ತೆಗೆದಿರಿಸಿರುವುದಾಗಿ ಹೇಳಿಕೊಂಡಿದ್ದ ಅವರು ಹೊಸದಿಲ್ಲಿ, ವಾರಣಾಸಿ, ಹರಿದ್ವಾರ ಹಾಗೂ ಬಿಹಾರದ ಪಾಟ್ನಾಗಳಲ್ಲಿ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಗುರಿಯನ್ನು ಹಾಕಿಕೊಂಡಿರುವುದಾಗಿ ಹೇಳಿದ್ದರು. ಇದಕ್ಕಾಗಿ ರಾಜ್ಯ ಸರಕಾರಗಳು ತಮಗೆ ಅಗತ್ಯ ಭೂಮಿ ನೀಡಲು ಮುಂದೆ ಬಂದಿರುವುದಾಗಿ, ಇಲ್ಲದಿದ್ದರೆ ಅಗತ್ಯ ಭೂಮಿಯನ್ನು ತಾವೇ ಖರೀದಿಸುವುದಾಗಿಯೂ ಅವರು ಒಮ್ಮೆ ಹೇಳಿಕೊಂಡಿದ್ದರು.

ಕೇರಳದ ಮೂಲಕ ಸ್ವದೇಶಕ್ಕೆ: ವಿದೇಶಗಳಲ್ಲೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ ಬಿ.ಆರ್.ಶೆಟ್ಟಿ, ಕೇರಳದ ಮೂಲಕ ಸ್ವದೇಶಕ್ಕೂ ಪಾದಾರ್ಪಣೆ ಮಾಡಿದರು. 2001ರಲ್ಲಿ ಅವರು ಮೊದಲಾಗಿ ತಿರುವನಂತಪುರಂನಲ್ಲಿ ಬಿ.ಆರ್. ಸೂಟ್ ಆಸ್ಪತ್ರೆ ಎಂಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿದರು. ಆ ಬಳಿಕ ಬೆಂಗಳೂರಿನಲ್ಲಿ 400 ಹಾಸಿಗೆಗಳ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಒರಿಸ್ಸಾದ ಭುವನೇಶ್ವರದಲ್ಲಿ ಕಳಿಂಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅವರು ನಿರ್ಮಿಸಿದ್ದರು.

ಬಿ.ಆರ್.ಶೆಟ್ಟಿ ಅವರ ಬಿ.ಆರ್.ಲೈಫ್ ಕಂಪೆನಿ ಮೂಲಕ ನಡೆಯುವ ಈ ಆಸ್ಪತ್ರೆಗಳು ಒಟ್ಟು 1,500 ಬೆಡ್‌ಗಳನ್ನು ನಿರ್ವಹಿಸುತ್ತಿವೆ. ಇದನ್ನು ಭವಿಷ್ಯದಲ್ಲಿ 20,000 ಹಾಸಿಗೆಗೆ ವಿಸ್ತರಿಸಲು ಗುರಿಯನ್ನು ಹಾಕಿಕೊಂಡಿರುವುದಾಗಿ ಅವರು ಒಮ್ಮೆ ಹೇಳಿಕೊಂಡಿದ್ದರು.

ಮಹಾಭಾರತ ಚಲನಚಿತ್ರ ಘೋಷಣೆ 
ಮಹಾಭಾರತದ ಕತೆ ಆಧರಿತ ರಂಡಾಮೂಳಮ್ ಕಾದಂಬರಿಯನ್ನು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ಮಾಡುವುದಾಗಿ ಬಿ.ಆರ್ ಶೆಟ್ಟಿ ಘೋಷಿಸಿದ್ದರು. ಸೂಪರ್ ಸ್ಟಾರ್ ಮೋಹನ್ ಲಾಲ್ ಸಹಿತ ದೇಶದ ಸುಪ್ರಸಿದ್ಧ ಸ್ಟಾರ್ ಗಳು ಇದರಲ್ಲಿ ವಿವಿಧ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಅದು ಬೇರೆ ಬೇರೆ ಕಾರಣಗಳಿಗಾಗಿ ಸೆಟ್ಟೇರಲಿಲ್ಲ. 

ಕಾಶ್ಮೀರದಲ್ಲಿ ಫಿಲ್ಮ್ ಸಿಟಿಯ ಕನಸು 
ಕೇಂದ್ರ ಸರಕಾರ ಕಾಶ್ಮೀರದಲ್ಲಿ 370ನೇ ವಿಧಿ ಹಾಗು ಅಲ್ಲಿನ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಅವರ ಯುಎಇ ಭೇಟಿ ಬೆನ್ನಿಗೆ ಅಲ್ಲಿ 12 ಚದರ ಕಿಮೀ ಪ್ರದೇಶದಲ್ಲಿ 3 ಸಾವಿರ ಕೋಟಿಗೂ ಹೆಚ್ಚು ಖರ್ಚಿನಲ್ಲಿ ಹೊಸ ಫಿಲ್ಮ್ ಸಿಟಿ ಒಂದನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.  ಕಾಶ್ಮೀರದಲ್ಲಿ ಒಟ್ಟು ಒಂದು ಬಿಲಿಯನ್ ಡಾಲರ್ ( ಸುಮಾರು 7 ಸಾವಿರ ಕೋಟಿ ರೂ ) ಹೂಡಿಕೆ ಮಾಡುವುದಾಗಿಯೂ ಅವರು ಹೇಳಿದ್ದರು. 

ಹುಟ್ಟೂರಲ್ಲಿ ಆಸ್ಪತ್ರೆ: ಆದರೆ ಬಿ.ಆರ್.ಶೆಟ್ಟಿ ಹುಟ್ಟೂರಿನಲ್ಲಿ ಅತ್ಯಾಧುನಿಕ ಆಸ್ಪತ್ರೆಯೊಂದನ್ನು ತೆರೆದು ಜನರ ಸೇವೆ ಮಾಡುವ ನಿರ್ಧಾರ ವಿವಾದವೊಂದನ್ನು ಹುಟ್ಟುಹಾಕಿತು. ಎಂಟು ದಶಕಗಳಿಂದ ಉಡುಪಿ ಜಿಲ್ಲೆಯ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ನೀಡುತ್ತಿದ್ದ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಪಿಪಿಪಿ ಆಧಾರದಲ್ಲಿ ನಡೆಸಲು ಬಿ.ಆರ್.ಶೆಟ್ಟಿ ಅವರ ಕಂಪೆನಿಗೆ ಒಪ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2016ರಲ್ಲಿ ತೆಗೆದುಕೊಂಡ ನಿರ್ಧಾರ ಈ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿದ ನಾಲ್ಕು ಎಕರೆ ಜಾಗವನ್ನು 30 ವರ್ಷಗಳ ಲೀಸ್‌ಗೆ ಬಿ.ಆರ್.ಶೆಟ್ಟಿ ಅವರಿಗೆ ಉಚಿತವಾಗಿ ನೀಡಿರುವುದು ಉಡುಪಿಯ ಜನರ ಕಣ್ಣು ಕೆಂಪಾಗಿಸಿತು. ಇದಕ್ಕೆ ಎಲ್ಲ ವಲಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದರೆ ಈ ಎಲ್ಲಾ ವಿವಾದವನ್ನು ಸರಕಾರದ ಸಹಕಾರದೊಂದಿಗೆ ಮೀರಿ ನಿಂತ ಬಿ.ಆರ್.ಶೆಟ್ಟರು 2018ರಲ್ಲಿ ಭವ್ಯ ಆಸ್ಪತ್ರೆ ತಲೆ ಎತ್ತಿ ನಿಲ್ಲುವಂತೆ ಮಾಡಿದರು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ 200 ಹಾಸಿಗೆಗಳ ಈ ಆಸ್ಪತ್ರೆ ಬಿಪಿಎಲ್, ಎಪಿಎಲ್ ಸೇರಿದಂತೆ ಎಲ್ಲರಿಗೂ ಉಚಿತ ಸೇವೆಯನ್ನು ನೀಡುತ್ತಿದೆ.

ಆದರೆ ಈ ಹಿಂದೆ ಹಾಜಿ ಅಬ್ದುಲ್ಲಾ ಆಸ್ಪತ್ರೆಯಿದ್ದ ಜಾಗದಲ್ಲಿ ನಿರ್ಮಾಣ ಗೊಳ್ಳಬೇಕಿದ್ದ ಅವರ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಮಾತ್ರ ಈಗ ಕುಂಟುತ್ತಾ ಸಾಗುತ್ತಿದೆ. ಕೊಲ್ಲಿ ರಾಷ್ಟ್ರದಲ್ಲಿ ಆಗಿರುವ ಬೆಳವಣಿಗೆ ಈ ಆಸ್ಪತ್ರೆಯ ನಿರ್ಮಾಣದಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬಿ.ಆರ್. ಶೆಟ್ಟಿ ಸಹಿತ 6 ಮಂದಿಯ ವಿರುದ್ಧ ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್
ಅಬುಧಾಬಿ (ಯುಎಇ): ಯುಎಇಯಾದ್ಯಂತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಎನ್‌ಎಂಸಿ ಹೆಲ್ತ್‌ಕೇರ್ ಕಂಪೆನಿಗೆ 3 ಬಿಲಿಯ ದಿರ್ಹಮ್ (ಸುಮಾರು 6,200 ಕೋಟಿ ರೂಪಾಯಿ) ಸಾಲ ನೀಡಿರುವ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ (ಎಡಿಸಿಬಿ), ಕಂಪೆನಿಯ ಸ್ಥಾಪಕ ಬಿ.ಆರ್. ಶೆಟ್ಟಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಮಂಘಟ್ ಸೇರಿದಂತೆ ಆರು ಮಂದಿಯ ವಿರುದ್ಧ ‘ವಂಚನೆ’ ದೂರು ಸಲ್ಲಿಸಿದೆ.

ಆರು ಮಂದಿಯ ವಿರುದ್ಧ ‘ವಂಚನೆ ನಡೆಸಿದ್ದಾರೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ದೂರು ಸಲ್ಲಿಸಿರುವುದನ್ನು ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ಬ್ಯಾಂಕ್ ಖಚಿತಪಡಿಸಿದೆ. ಆದರೆ, ಆರೋಪಿಗಳ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

ಆದರೆ, ದೂರಿನ ಪ್ರತಿಯೊಂದನ್ನು 'Khaleej Times' ಪಡೆದುಕೊಂಡಿದ್ದು, ಅದರಲ್ಲಿ ಎಲ್ಲ ಆರೋಪಿಗಳ ವಿವರಗಳಿವೆ. ಬಿ.ಆರ್. ಶೆಟ್ಟಿ ಮತ್ತು ಮಂಘಟ್‌ರನ್ನು ಹೊರತುಪಡಿಸಿ, ಇತರ ಆರೋಪಿಗಳನ್ನು ಸುರೇಶ್ ಕುಮಾರ್, ಪ್ರಶಾಂತ್ ಶೆಣೈ, ಸಈದ್ ಮೊಹಮ್ಮದ್ ಅಲ್ ಖಬಾಯಿಸ್ ಮತ್ತು ಖಲೀಫ ಬುಟ್ಟಿ ಉಮೈರ್ ಯೂಸುಫ್ ಎಂಬುದಾಗಿ ಗುರುತಿಸಲಾಗಿದೆ.

ನಮ್ಮ ಪರವಾಗಿ, ನಮ್ಮ ಸಹ ಸಂಸ್ಥೆ ಅಲ್ ಹಿಲಾಲ್ ಬ್ಯಾಂಕ್ ಪರವಾಗಿ ಮತ್ತು ನಾವು ವಹಿಸಿಕೊಂಡಿರುವ ಯುನೈಟೆಡ್ ನ್ಯಾಶನಲ್ ಬ್ಯಾಂಕ್ ಪರವಾಗಿ ದೂರು ಸಲ್ಲಿಸಿರುವುದಾಗಿ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ತಿಳಿಸಿದೆ. ಆರೋಪಿಗಳು ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಹಾಗೂ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘‘ಆರೋಪಿಗಳು ಪರಸ್ಪರ ಶಾಮೀಲಾಗಿ ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಹಾಗೂ ಈ ನಕಲಿ ದಾಖಲೆಗಳ ಮೂಲಕ ಎನ್‌ಎಂಸಿ ಗ್ರೂಪ್‌ನ ಒಟ್ಟು ಸಾಲಗಳ ಬಗ್ಗೆ ತಪ್ಪು ವಿವರಗಳನ್ನು ಉದ್ದೇಶಪೂರ್ವಕವಾಗಿ ನೀಡಿದ್ದಾರೆ’’ ಎಂದು ದೂರಿನಲ್ಲಿ ಹೇಳಲಾಗಿದೆ.

‘‘ಅದೂ ಅಲ್ಲದೆ, ಆರೋಪಿಗಳು ತಮ್ಮ ಕಂಪೆನಿಯ ಕುರಿತ ತಪ್ಪು ಮೌಲ್ಯಮಾಪನಗಳನ್ನು ಎಡಿಸಿಬಿ ಮತ್ತು ಅದರ ಸಹ ಸಂಸ್ಥೆಗಳಿಗೆ ಸಲ್ಲಿಸಿದ್ದಾರೆ ಹಾಗೂ ತಮ್ಮ ಸಾಮರ್ಥ್ಯವನ್ನು ತಪ್ಪಾಗಿ ಬಿಂಬಿಸಿದ್ದಾರೆ. ಆ ಮೂಲಕ ದೂರುದಾರ ಸಂಸ್ಥೆಯು ಸಾಲಗಳನ್ನು ನೀಡುವಂತೆ ಮಾಡಿದ್ದಾರೆ ಹಾಗೂ ದೂರುದಾರ ಸಂಸ್ಥೆಯನ್ನು ವಂಚಿಸಿದ್ದಾರೆ’’ ಎಂದು ಬ್ಯಾಂಕ್ ತನ್ನ ದೂರಿನಲ್ಲಿ ಆರೋಪಿಸಿದೆ.

ಸಂಪೂರ್ಣ ಸತ್ಯವನ್ನು ಶೀಘ್ರವೇ ಜನರ ಮುಂದಿಡುವೆ: ಬಿ.ಆರ್. ಶೆಟ್ಟಿ

‘‘ನಾನು ಸಾಲ ನೀಡುವ ಎಲ್ಲ ಬ್ಯಾಂಕ್‌ಗಳೊಂದಿಗೆ ದಶಕಗಳಿಂದ ಕೆಲಸ ಮಾಡಿದ್ದೇನೆ. ಅವರು ನನ್ನ ಪ್ರಮುಖ ಭಾಗೀದಾರರಾಗಿದ್ದಾರೆ. ಅದರಿಂದಾಗಿಯೇ ಯುಎಇಯಲ್ಲಿ ನನ್ನ ಉದ್ಯಮ ಆರಂಭಿಸಲು ಸಾಧ್ಯವಾಗಿದೆ’’ ಎಂದು ಈಗ ಭಾರತದಲ್ಲಿರುವ ಬಿ.ಆರ್. ಶೆಟ್ಟಿ 'Khaleej Times' ಗೆ ಹೇಳಿದ್ದಾರೆ.

‘‘ನಾನು ಕಳೆದ ವಾರ ಹೇಳಿರುವಂತೆ, ನನ್ನದೇ ಆದ ಕಾನೂನು ಮತ್ತು ವಿಧಿವಿಜ್ಞಾನ ತನಿಖೆಗಳಿಂದ ಕೆಲವು ಅಂಶಗಳು ಹೊರಬಂದಿವೆ. ನನ್ನ ವಿರುದ್ಧ ಮಾಡಲಾಗಿರುವ ಕೆಲವು ತಪ್ಪು ಆರೋಪಗಳ ವಿಷಯದಲ್ಲಿ, ಯುಎಇ ಮತ್ತು ಇತರೆಡೆಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ನಾನು ಕಳೆದ ವಾರವೇ ಹೇಳಿರುವಂತೆ, ಏನು ನಡೆದಿದೆ ಎಂಬ ಬಗ್ಗೆ ಸಾಧ್ಯವಾದಷ್ಟು ಬೇಗ ನಾನು ಸಂಪೂರ್ಣ ಸತ್ಯವನ್ನು ಮತ್ತು ಎಲ್ಲ ವಾಸ್ತವಾಂಶಗಳನ್ನು ಜನರ ಮುಂದಿಡಲು ನಾನು ದೃಢ ನಿರ್ಧಾರ ಮಾಡಿದ್ದೇನೆ’’ ಎಂದು ಅವರು ನುಡಿದರು.

ಕಂಪೆನಿಯ ಮೌಲ್ಯ 18,450 ಕೋಟಿ ರೂ.; ಸಾಲ 50,750 ಕೋಟಿ ರೂ.

ಎನ್‌ಎಮ್‌ಸಿ ಹೆಲ್ತ್ ಕಂಪೆನಿಯ ಒಟ್ಟು ಮಾರುಕಟ್ಟೆ ಮೌಲ್ಯ 2.4 ಬಿಲಿಯ ಡಾಲರ್ (ಸುಮಾರು 18,450 ಕೋಟಿ ರೂಪಾಯಿ) ಹಾಗೂ ಅದು ಹೊಂದಿರುವ ಒಟ್ಟು ಸಾಲ 6.6 ಬಿಲಿಯ ಡಾಲರ್ (ಸುಮಾರು 50,750 ಕೋಟಿ ರೂಪಾಯಿ).

2019 ಡಿಸೆಂಬರ್‌ನಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ‘ಮಡ್ಡಿ ವಾಟರ್ಸ್’ ಎನ್‌ಎಮ್‌ಸಿ ಕಂಪೆನಿಯ ಆರ್ಥಿಕ ಅವ್ಯವಹಾರಗಳನ್ನು ಪ್ರಶ್ನಿಸಿದ ಬಳಿಕ, ಕಂಪೆನಿಯ ಶೇರು ಮೌಲ್ಯವು 70 ಶೇಕಡಕ್ಕೂ ಅಧಿಕದಷ್ಟು ಕಡಿಮೆಯಾಗಿದೆ.

ಎನ್‌ಎಮ್‌ಸಿ ಹೆಲ್ತ್ ಕಂಪೆನಿಗೆ 80ಕ್ಕೂ ಅಧಿಕ ಸ್ಥಳೀಯ, ಪ್ರಾದೇಶಿಕ ಮತ್ತು ಅಂತರ್‌ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡಿವೆ. ಯುಎಇಯ ಬ್ಯಾಂಕ್‌ಗಳು ಕಂಪೆನಿಗೆ ಸುಮಾರು 10 ಬಿಲಿಯ ದಿರ್ಹಮ್ (ಸುಮಾರು 20,900 ಕೋಟಿ ರೂಪಾಯಿ) ಸಾಲ ನೀಡಿವೆ.

ಭಾರತದಲ್ಲೂ ಶೆಟ್ಟಿ ವಿರುದ್ಧ ತನಿಖೆ ?

ಯುಎಇ ಯಲ್ಲಿ ವಿವಿಧ ವಂಚನೆ ಆರೋಪ ಎದುರಿಸುತ್ತಿರುವ ಬಿ ಆರ್ ಶೆಟ್ಟಿ ಭಾರತದ ಬ್ಯಾಂಕ್ ಗಳ ವ್ಯವಹಾರದ ಮೇಲೆ ಇದೀಗ ಇಲ್ಲಿನ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ ಎಂದು ಐಎಎನ್ನೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿ ಆರ್ ಶೆಟ್ಟಿ ಅವರಿಗೆ ಭಾರತದಲ್ಲೂ ವಿವಿಧ ಹೂಡಿಕೆಗಳಿರುವುದು ಇಲ್ಲಿ ಗಮನಾರ್ಹ. ಯುಎಇ ಯಲ್ಲಿ ಆರ್ಥಿಕ ವಂಚನೆ ಕುರಿತ ಪ್ರಕರಣಗಳು ಅವರ ವಿರುದ್ಧ ದಾಖಲಾಗಿರುವುದರಿಂದ ಇಲ್ಲೂ ಅವರ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ವಿವಿಧ ತನಿಖಾ ಸಂಸ್ಥೆಗಳು ನಿಗಾ ಇಟ್ಟಿವೆ ಎಂದು ಹೇಳಲಾಗಿದೆ.  

ಯುಎಇ ಗೋಲ್ಡ್ ಕಾರ್ಡ್ ನಿಂದ ಆರೋಪಿವರೆಗೆ 
ಯುಎಇ ಹೂಡಿಕೆದಾರರು ಹಾಗೂ ಪ್ರತಿಭೆಗಳನ್ನು ಆಕರ್ಷಿಸಲು ಕಳೆದ ವರ್ಷ ಪ್ರಾರಂಭಿಸಿದ 10 ವರ್ಷಗಳ ಸುದೀರ್ಘ ಅವಧಿಯ ಹಾಗು ವಿಶೇಷ ಸೌಲಭ್ಯಗಳಿರುವ ಗೋಲ್ಡ್ ಕಾರ್ಡ್ ವೀಸಾವನ್ನು ಪಡೆದ ಪ್ರಪ್ರಥಮ ಅನಿವಾಸಿ ಭಾರತೀಯರಲ್ಲಿ ಬಿ.ಆರ್ ಶೆಟ್ಟಿ ಕೂಡ ಒಬ್ಬರು. ಈಗ ಅದೇ ದೇಶದಲ್ಲಿ ಅವರು ವಂಚನೆಯ ಆರೋಪ ಎದುರಿಸಿ ಆ ದೇಶದಿಂದ ಹೊರಗಿದ್ದಾರೆ. ವರದಿಗಳ ಪ್ರಕಾರ ಅವರು ಕಳೆದ ಎರಡು ತಿಂಗಳುಗಳಿಂದ ಭಾರತದಲ್ಲೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News