ಲಾಕ್‍ಡೌನ್ ಮುಗಿದ ಬಳಿಕವೇ ಎಸೆಸೆಲ್ಸಿ ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಎ.17: ಲಾಕ್‍ಡೌನ್ ಮುಗಿದ ನಂತರವೇ ಎಸೆಸೆಲ್ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಎಪ್ರಿಲ್‍ನಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಪೂರ್ವದಲ್ಲಿ 7ರಿಂದ 10ದಿನಗಳ ಪುನರ್ ಮನನ ಅವಧಿಯನ್ನು ಕಲ್ಪಿಸಿ, ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಮೂಡಿಸಲಾಗುವುದು. ಮೇ ತಿಂಗಳಿನಲ್ಲಿ ಕೊರೋನ ಸೋಂಕಿನ ಸ್ವರೂಪವನ್ನು ನೋಡಿಕೊಂಡು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಅವರು ಮನವಿ ಮಾಡಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಕರು ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಜತೆಗೆ ದೂರದರ್ಶನದ ಚಂದನ ವಾಹಿನಿ ಮತ್ತು ಆಕಾಶವಾಣಿಯಲ್ಲಿ ಮಕ್ಕಳ ಉಪಯೋಗಕ್ಕಾಗಿ ಈಗಾಗಲೇ ಪ್ರಸಾರ ಮಾಡಿರುವ ಪರೀಕ್ಷಾ ಸಿದ್ಧತಾ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಲಾಗುವುದು. ಲಾಕ್‍ಡೌನ್ ಬಳಿಕ ಪಿಯು ಉಪನ್ಯಾಸಕರ ನೇಮಕಾತಿ ಕೌನ್ಸಲಿಂಗ್ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
6ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಿರುವ ಕೆಲವು ತಾಂತ್ರಿಕ ವಿಷಯಗಳಿಗೆ ತಿದ್ದುಪಡಿತರುವ ಮೂಲಕ ಬಿಇ, ಬಿಕಾಂ, ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೂ ನೇಮಕಾತಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.