×
Ad

ಕಚೇರಿಗೆ ತೆರಳಲು ಅವಕಾಶ ಕೋರಿ ಡಿಜಿ-ಐಜಿಪಿಗೆ ಪತ್ರ ಬರೆದ ಬೆಂಗಳೂರು ವಕೀಲರ ಸಂಘ

Update: 2020-04-17 21:57 IST

ಬೆಂಗಳೂರು, ಎ.17: ವಕೀಲ ವೃತ್ತಿ ಕೂಡ ಸೇವಾ ವಲಯವಾಗಿರುವುದರಿಂದ ವಕೀಲರಿಗೂ ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಕಚೇರಿಗಳಿಗೆ ತೆರಳಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕೆಂದು ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಈ ಸಂಬಂಧ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಕೋಶಾಧಿಕಾರಿ ಶಿವಮೂರ್ತಿ ಅವರು, ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಾಣಿಜ್ಯ ಮತ್ತು ಇತರ ಸೇವೆ ಒದಗಿಸುವವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಅವಕಾಶ ಕಲ್ಪಿಸುವಂತೆ ಸೂಚಿಸಿದೆ.

ಸೇವಾ ವಲಯದಲ್ಲಿ ಬರುವ ಸ್ವಯಂ ಉದ್ಯೋಗಿಗಳಾದ ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕ್ಯಾನಿಕ್, ಕಾರ್ಪೆಂಟರ್ ಗಳು ಮತ್ತು ಈ ವರ್ಗಕ್ಕೆ ಬರುವ ಸೇವಾ ವಲಯದವರ ಕೆಲಸ ಕಾರ್ಯಗಳಿಗಾಗಿ ಅವಕಾಶ ಕಲ್ಪಸುವಂತೆ ಕೇಂದ್ರ ಸರಕಾರ ಸೂಚಿಸಿದೆ.

ಅದೇ ರೀತಿ ವಕೀಲರು ಕೂಡ ಸೇವಾ ವಲಯಕ್ಕೆ ಸೇರಿದವರಾಗಿದ್ದು, ವಕೀಲರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿದರೆ, ಓಡಾಡಲು ಅವಕಾಶ ನೀಡುವಂತೆ ಪೋಲಿಸರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News