×
Ad

ಅನಧಿಕೃತ ಕಟ್ಟಡಗಳ ಸಕ್ರಮಕ್ಕೆ ಕ್ರಮ: ಸಿಎಂ ಯಡಿಯೂರಪ್ಪ

Update: 2020-04-17 22:24 IST

ಬೆಂಗಳೂರು, ಎ.17: ರಾಜ್ಯದಲ್ಲಿ ಹಲವಾರು ಅನಧಿಕೃತ ಬಡಾವಣೆಗಳು ಮತ್ತು ಕಟ್ಟಡಗಳಿಗೆ ಸರಕಾರ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದೆ. ಆದರೆ, ಸರಕಾರಕ್ಕೆ ಯಾವುದೇ ತೆರಿಗೆ ಬರುತ್ತಿಲ್ಲ. ಅನಧಿಕೃತ ಕಟ್ಟಡಗಳನ್ನು ಸಕ್ರಮ ಮಾಡುವುದರ ಜೊತೆಗೆ ರಾಜಸ್ವ ಸಂಗ್ರಹದ ಗುರಿ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ನಗರದ ಗೃಹ ಕಚೇರಿಯಲ್ಲಿ ಅಕ್ರಮ ಸಕ್ರಮದ ಕುರಿತು ಸಭೆಯಲ್ಲಿ ಚರ್ಚಿಸಿದ್ದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ 2.93 ಲಕ್ಷ ಅನಧಿಕೃತ ಕಟ್ಟಡಗಳಿವೆ. ಒಂದು ಹಳೆ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 35 ಲಕ್ಷ ಅನಧಿಕೃತ ಕಟ್ಟಡಗಳಿವೆ. ಈಗ ಅದು ಎರಡರಷ್ಟು ಆಗಿರಬಹುದು. ಬೆಂಗಳೂರು ಹೊರತುಪಡಿಸಿ ಇತರೆಡೆಗಳಲ್ಲಿ ಅನಧಿಕೃತ ಕಟ್ಟಡಗಳಿಗೆ ದ್ವಿಗುಣ ತೆರಿಗೆ ವಿಧಿಸಲಾಗುತ್ತಿದೆ ಎಂದರು.

ಕಾನೂನಿನಡಿ ಶೇ.50ರವರೆಗಿನ ನಿರ್ಮಾಣ ನಿಯಮ ಉಲ್ಲಂಘನೆಗೆ ಶೇ.6ರವರೆಗೆ ಹಾಗೂ ಅದಕ್ಕಿಂತ ಹೆಚ್ಚಿನ ಉಲ್ಲಂಘನೆಗೆ ಮಾರುಕಟ್ಟೆ ಮೌಲ್ಯದ ಶೇ.25ರವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಅನಧಿಕೃತ ಆಸ್ತಿಗಳ ಸಕ್ರಮಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪುನರ್ ರಚಿಸಲು ತೀರ್ಮಾನಿಸಲಾಗಿದೆ. ಇತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸಲು ಸಹ ತೀರ್ಮಾನಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಒಂದು ವಾರದೊಳಗೆ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News