ಯೋಧರಿಗಾಗಿಯೇ ಬೆಂಗಳೂರಿನಿಂದ ವಿಶೇಷ ರೈಲುಗಳ ಸಂಚಾರ

Update: 2020-04-17 17:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.17: ಕೊರೋನ ವೈರಸ್ ಸೊಂಕು ಹರಡದಂತೆ ತಡೆಯಲು ಲಾಕ್ ಡೌನ್ ಹಿನ್ನೆಲೆ ಯೋಧರಿಗಾಗಿಯೇ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಬೆಂಗಳೂರು ನಗರದಿಂದ ಎರಡು ವಿಶೇಷ ರೈಲುಗಳು ಸಂಚಾರ ನಡೆಸಲು ರೈಲ್ವೇ ಇಲಾಖೆ ನಿರ್ಧರಿಸಿದ್ದು, ಭಾರತೀಯ ಯೋಧರ ತಂಡವನ್ನು ದೇಶದ ಉತ್ತರ ಮತ್ತು ಪೂರ್ವದ ಗಡಿಗೆ ಈ ರೈಲು ತಲುಪಿಸಲಿದೆ.

ಎ.17ರಂದು ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೊದಲ ರೈಲು ಬೆಂಗಳೂರಿನಿಂದ ಹೊರಡಲಿದೆ. ಜಮ್ಮು ಮತ್ತು ಅಂಬಾಲಕ್ಕೆ ಯೋಧರು ಇದರಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಶನಿವಾರ ಮತ್ತೊಂದು ರೈಲು ಹೊರಡಲಿದ್ದು, ಗೌಹಾತಿಗೆ ಸಂಚಾರ ನಡೆಸಲಿದೆ.

14 ದಿನ ಕ್ವಾರಂಟೈನ್‍ನಲ್ಲಿದ್ದ ಯೋಧರು, ತಮ್ಮ ತಂಡಕ್ಕೆ ಮರಳಲಿರುವ ಯೋಧರು ಮಾತ್ರ ಈ ರೈಲಿನಲ್ಲಿ ಸಂಚಾರ ನಡೆಸಲಿದ್ದಾರೆ. ಇದರಿಂದಾಗಿ ಬೆಂಗಳೂರು, ಬೆಳಗಾವಿ, ಸಿಕಂದರಾಬಾದ್ ಕ್ಯಾಂಪ್‍ಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಸಹಾಯಕವಾಗಲಿದೆ.

ಗಡಿ ಪ್ರದೇಶದಲ್ಲಿ ಭಯೋತ್ಪಾದಕ ಚುಟವಟಿಕೆಗಳು ನಡೆಯುತ್ತಿವೆ. ಆದ್ದರಿಂದ, ಕ್ಯಾಂಪ್‍ಗಳಲ್ಲಿ ತರಬೇತಿ ಪಡೆಯುತ್ತಿದ್ದ ಯೋಧರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಕೆಲವು ಯೋಧರು ರಜೆ ಮೇಲೆ ಬಂದಿದ್ದು, ಕ್ಯಾಂಪ್‍ಗೆ ಮರಳುತ್ತಿದ್ದಾರೆ.

ಭಾರತೀಯ ರೈಲ್ವೆ ಜೊತೆ ರಕ್ಷಣಾ ಇಲಾಖೆ ಮಾತುಕತೆ ನಡೆಸಿದೆ. ದೇಶದ ವಿವಿಧ ಪ್ರದೇಶಗಳಿಂದ ಇಂತಹ ರೈಲುಗಳನ್ನು ಓಡಿಸಲು ಸಾಧ್ಯವೇ? ಎಂದು ಪರಿಶೀಲನೆ ಮಾಡುವಂತೆ ಮನವಿ ಮಾಡಿದೆ.

ರಕ್ಷಣಾ ಪಡೆಯ ಮುಖ್ಯ ಕಚೇರಿಯಿಂದ ನೋ ಮೂಮೆಂಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಎಲ್ಲಾ ತುಕಡಿಗಳು, ಕಂಟೋನ್ಮೆಂಟ್‍ಗಳು ಎ.19ರ ತನಕ ಎಲ್ಲಿಯೂ ಹೋಗುವಂತಿಲ್ಲ. ಎ.20ರಿಂದ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News