67 ವರ್ಷಗಳ ನಂತರ ಸಕಾಲಕ್ಕೆ ನೆರವೇರದ ಬಿಬಿಎಂಪಿ ಬಜೆಟ್
ಬೆಂಗಳೂರು, ಎ.18: ಸುಮಾರು 67 ವರ್ಷಗಳ ನಂತರ ಕೊರೋನ ಭೀತಿಯ ಹಿನ್ನೆಲೆ ಸಕಾಲಕ್ಕೆ ಬಿಬಿಎಂಪಿ ಬಜೆಟ್ ಮಂಡನೆ ತಡವಾಗಿದ್ದು, ಇದೇ ಪ್ರಪ್ರಥಮ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 2020-21ನೇ ಸಾಲಿನ ಬಜೆಟ್‍ಅನ್ನು ಎ.20ರಂದು ಮಧ್ಯಾಹ್ನ 12ಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಮಂಡನೆ ಮಾಡಲಿದ್ದಾರೆ.
1953ರಲ್ಲಿ ಬೆಂಗಳೂರು ನಗರದಲ್ಲಿ ಕಾಲರಾ ಭೀತಿ ಕಾಡಿದ್ದಾಗಲೂ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ಸಾಧ್ಯವಾಗಿರಲಿಲ್ಲ. 1953ರಲ್ಲಿ 31 ನಗರಸಭೆ ಸದಸ್ಯರು ಹಾಗೂ ಇಬ್ಬರು ಆಂಗ್ಲೋ ಇಂಡಿಯನ್ ಸೇರಿದಂತೆ 6 ಮಂದಿ ನಾಮ ನಿರ್ದೇಶಿತ ಸದಸ್ಯರು ಸೇರಿ ಅಂದಿನ ಬಜೆಟ್‍ಅನ್ನು ಮೇಯೋಹಾಲ್‍ನಲ್ಲಿ ಮಂಡನೆ ಮಾಡಿದ್ದರು. ಅದನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಅತೀ ಕಡಿಮೆ ಸದಸ್ಯರು ಸೇರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಈಗಾಗಲೇ ಬಿಬಿಎಂಪಿ 2020- 21ನೇ ಸಾಲಿನ ಬಜೆಟ್ ಮಂಡನೆಗೆ ಬಿರುಸಿನ ಸಿದ್ಧತೆ ನಡೆಸಲಾಗಿದೆ. ಬಜೆಟ್ ಗಾತ್ರ 11 ಸಾವಿರ ಕೋಟಿ ರೂ. ಮೀರದಿರಲಿ ಎಂದು ಹಣಕಾಸು ವಿಭಾಗವು ಸಲಹೆ ನೀಡಿದ್ದು, ಈ ಬಾರಿ ಚುನಾವಣಾ ಬಜೆಟ್ ಮಂಡಿಸುವ ಬದಲು ಜನಪರ ಬಜೆಟ್ ಮಂಡನೆಗೆ ಒತ್ತು ನೀಡುವ ಸಾಧ್ಯತೆ ಹೆಚ್ಚಿದೆ.
ನಗರದಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಹಾವಳಿ ತಡೆಗಟ್ಟಲು ಈಗಾಗಲೇ ಪ್ರತಿ ವಾರ್ಡ್‍ಗೆ ತಲಾ 25 ಲಕ್ಷರೂ. ಅನುದಾನ ನೀಡಲು 50 ಕೋಟಿ ರೂ. ಅನ್ನು ಈ ಸಾಲಿನ ಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ. ಅಲ್ಲದೇ, ಬಿಬಿಎಂಪಿಯ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಲು, ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು, ಕಸದ ಸಮಸ್ಯೆ ನಿವಾರಣೆಗೆ ಹಾಗೂ ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವರ್ಗದವರ ಒಂಟಿ ಮನೆ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಲಾಗಿದೆ. ಕಳೆದ ಬಾರಿ ಜಾರಿಗೆ ತಂದ ಸಿದ್ದಗಂಗಾ ಶ್ರೀಗಳ ಹೆಸರಿನ ಪ್ರಶಸ್ತಿಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.
ಮಾಜಿ ಕೇಂದ್ರ ಸಚಿವ ದಿ. ಅನಂತ್‍ಕುಮಾರ್ ಅವರ ಸ್ಮರಣಾರ್ಥ ಹೊಸ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಗುವುದು. ಪ್ರತಿ ವಾರ್ಡ್‍ನ 15 ವಿದ್ಯಾರ್ಥಿಗಳಿಗೆ 65 ಸಾವಿರ ರೂ. ಬೆಲೆ ಬಾಳುವ 17 ಇಂಚಿನ ಲ್ಯಾಪ್‍ಟಾಪ್ ವಿತರಿಸುವ ಅನಂತ್ ಕುಮಾರ್ ವಿದ್ಯಾರ್ಥಿ ಯೋಜನೆಯನ್ನು ಘೋಷಣೆ ಮಾಡಲಾಗುತ್ತಿದೆ.
ಬಿಬಿಎಂಪಿಯ 8 ವಲಯಗಳಲ್ಲಿ ಸುಷ್ಮಾ ಸ್ವರಾಜ್ ಹೆಸರಿನಲ್ಲಿ ಹೈಟೆಕ್ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ಬೊಮ್ಮನಹಳ್ಳಿಯಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿರುವ ಎರಡೂವರೆ ಎಕರೆ ಜಮೀನಿನಲ್ಲಿ ದೀನ್‍ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಆರಂಭಿಸಲು ತೀರ್ಮಾನಿಸಲಾಗಿದೆ. 50 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ ಪ್ರಸಕ್ತ ವರ್ಷ 25 ಕೋಟಿ ರೂ., ಮುಂದಿನ ವರ್ಷ 25 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರದ ನಾಲ್ಕು ದಿಕ್ಕುಗಳಲ್ಲಿ ಐಸಿಯು ವ್ಯವಸ್ಥೆಗಳನ್ನು ಒಳಗೊಂಡ ನಾಲ್ಕು ಡಾಗ್ ಕೆನಲ್‍ಗಳನ್ನು ಸ್ಥಾಪಿಸಲು ತಲಾ ಎರಡು ಕೋಟಿ ರೂ. ಮೀಸಲಿರಿಸಲಾಗಿದೆ. ನಗರದ ನಾಲ್ಕು ದಿಕ್ಕಿನಲ್ಲಿ ನಾಲ್ಕು ವಿದ್ಯುತ್ ಚಿತಾಗಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಉಚಿತ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದ್ದು, ರುದ್ರಭೂಮಿಗಳಲ್ಲಿ ಕರೆಂಟ್ ಬದಲು ಗ್ಯಾಸ್ ಅಳವಡಿಸುವ ತೀರ್ಮಾನವನ್ನು ಈ ಬಜೆಟ್‍ನಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಹೊಸಬೆಳಕು ಯೋಜನೆಯಡಿ 75 ವರ್ಷ ಮೇಲ್ಪಟ್ಟ ಅಸಕ್ತ ಕಲಾವಿದರಿಗೆ ತಲಾ ಒಂದು ಲಕ್ಷ ರೂ. ಸಹಾಯಧನ ನೀಡಲು ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ.
ಬಿ ಖಾತಾಗಳು ಎ ಖಾತಾಗಳಾಗಿ ಪರಿವರ್ತನೆ
ಮಹಾತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರುವ ತೀರ್ಮಾನಕ್ಕೆ ಸರಕಾರ ಬಂದಿರುವ ಬೆನ್ನಲ್ಲೇ ನಗರದ ರೆವಿನ್ಯೂ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ಪರಿವರ್ತಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,430 ರೆವಿನ್ಯೂ ಬಡಾವಣೆಗಳಿದ್ದು, ಇಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ರೆವಿನ್ಯೂ ನಿವೇಶನದಾರರಿಗೆ ಈ ತೀರ್ಮಾನ ವರದಾನವಾಗಲಿದೆ.
ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ಗಾತ್ರ 11 ಸಾವಿರ ಕೋಟಿ ರೂ. ಮೀರುವುದಿಲ್ಲ. ಕನ್ನಡ ಪತ್ರಿಕೋದ್ಯಮ ಉಳಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. 198 ವಾರ್ಡ್‍ಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಪತ್ರಕರ್ತರಿಗೆ ಆರೋಗ್ಯ ಹಾಗೂ ಅಪಘಾತ ವಿಮೆಯನ್ನು ಪ್ರಕಟಿಸುವ ಸಾಧ್ಯತೆಗಳೂ ಇವೆ.
-ಎಲ್. ಶ್ರೀನಿವಾಸ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ