×
Ad

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಆರೋಪ: ಪ್ರಕರಣವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು- ಹೈಕೋರ್ಟ್

Update: 2020-04-19 22:07 IST

ಬೆಂಗಳೂರು, ಎ.19: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣವನ್ನು ಪ್ರಾಸಿಕ್ಯೂಷನ್ ವಿಶಾಲ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ.

ಜಾಮೀನು ಕೋರಿ ಆರೋಪಿಗಳಾದ ತಾಲಿಬ್ ಮಜೀದ್, ಆಮಿರ್ ಮೊಹಿಯುದ್ದಿನ್ ವನಿ ಹಾಗೂ ಬಸೀತ್ ಆಶಿಖ್ ಸೋಫಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.

ಆರೋಪಿಗಳು ದೇಶದ್ರೋಹ ಅಪರಾಧ ಎಸಗಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ಪ್ರಬಲ ಅಂಶಗಳನ್ನು ಪ್ರಾಸಿಕ್ಯೂಷನ್ ಮೇಲ್ನೋಟಕ್ಕೆ ಬಹಿರಂಗಪಡಿಸುತ್ತಿಲ್ಲ. ಅಂತೆಯೇ ಈ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಸ್ಕಾಲರ್ ಶಿಪ್ ಪಡೆಯುತ್ತಿರುವವರು ಎಂಬ ಅಂಶ ಗಮನಾರ್ಹ. ಇವರಿಗೆಲ್ಲಾ ಆಪ್ತ ಸಮಾಲೋಚನೆಯ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಸಿಕ್ಯೂಷನ್, ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ನ್ಯಾಯಾಲಯದಿಂದ ದಾಖಲೆ ತರಿಸಿಕೊಳ್ಳಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದೆ. ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಎ.24ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News