ಆನ್‌ಲೈನ್ ವ್ಯವಹಾರಕ್ಕೆ ಮತ್ತೆ ಕೇಂದ್ರದ ಅಂಕುಶ

Update: 2020-04-19 18:37 GMT

ಹೊಸದಿಲ್ಲಿ, ಎ.19: ಆನ್‌ಲೈನ್‌ನಲ್ಲಿ ಎಪ್ರಿಲ್ 20ರಿಂದ ಮೊಬೈಲ್ ಫೋನ್, ರೆಫ್ರಿಜರೇಟರ್, ರೆಡಿಮೇಡ್ ಬಟ್ಟೆಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂಬ ಆದೇಶದಿಂದ ಯು-ಟರ್ನ್ ಹೊಡೆದಿರುವ ಕೇಂದ್ರ ಸರಕಾರ, ಆನ್‌ಲೈನ್‌ನಲ್ಲಿ ದೈನಂದಿನ ಬಳಕೆಯ ಅಗತ್ಯದ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

ಇ-ಕಾಮರ್ಸ್ ಸಂಸ್ಥೆಗಳು(ಆನ್‌ಲೈನ್ ಮೂಲಕ ವ್ಯವಹಾರ ನಡೆಸುವ ಸಂಸ್ಥೆಗಳು ) ಆಹಾರ, ಔಷಧೀಯ ಮತ್ತು ವೈದ್ಯಕೀಯ ಸಾಧನಗಳನ್ನು ಮಾರಾಟ ಮಾಡಲು ಅವಕಾಶವಿದೆ . ಆನ್‌ಲೈನ್ ವ್ಯವಹಾರದಿಂದ ಅಗತ್ಯದ ವಸ್ತುಗಳನ್ನು ಹೊರಗಿರಿಸುವ ಆದೇಶವನ್ನು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಜಾರಿ ಮಾಡಿದ್ದಾರೆ.

ಎಪ್ರಿಲ್ 15ರಂದು ಹೊರಡಿಸಿದ್ದ ಆದೇಶದಲ್ಲಿದ್ದ ‘ಇ-ಕಾಮರ್ಸ್ ವ್ಯವಹಾರ ನಿರ್ವಹಿಸುವವರು ಬಳಸುವ ವಾಹನಗಳನ್ನು ಅಗತ್ಯ ಅನುಮತಿಯೊಂದಿಗೆ ಸಂಚರಿಸಲು ಅವಕಾಶ ನೀಡಲಾಗುವುದು ’ ಎಂಬ ಪರಿಚ್ಛೇದವನ್ನು ಹೊಸ ಆದೇಶದಲ್ಲಿ ಕೈಬಿಡಲಾಗಿದೆ .

ಲಾಕ್‌ಡೌನ್ ಮೇ 3ರವರೆಗೆ ಮುಂದುವರಿದಿದ್ದರೂ ಎಪ್ರಿಲ್ 20ರಿಂದ ಆನ್‌ಲೈನ್ ಮೂಲಕ ಮೊಬೈಲ್, ಲ್ಯಾಪ್‌ಟಾಪ್, ಟಿವಿ ಮುಂತಾದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರಕಾರ ಎಪ್ರಿಲ್ 15ರಂದು ಹೊರಡಿಸಿದ್ದ ಮಾರ್ಗದರ್ಶಿ ಸೂತ್ರದಲ್ಲಿ ಪ್ರಕಟಿಸಿತ್ತು. ಆದರೆ ಇದಕ್ಕೆ ಸ್ಥಳೀಯ ವರ್ತಕರಿಂದ ವಿರೋಧ ವ್ಯಕ್ತವಾಗಿತ್ತು. ತಮಗೆ ಮಾರಾಟಕ್ಕೆ ಅವಕಾಶ ನೀಡದೆ, ಆನ್‌ಲೈನ್ ಮಾರಾಟಕ್ಕೆ ಮಾತ್ರ ಅವಕಾಶ ನೀಡುವ ಮೂಲಕ ಕೇಂದ್ರ ಸರಕಾರ ತಾರತಮ್ಯ ಮಾಡಿದೆ ಎಂದು ವರ್ತಕರು ಅಸಮಾಧಾನ ಸೂಚಿಸಿದ್ದರು.

ಎಪ್ರಿಲ್ 15ರಂದು ಹೊರಡಿಸಿದ್ದ ಆದೇಶದಲ್ಲಿ ಮೊಬೈಲ್ ಫೋನ್, ಟಿವಿ, ರೆಪ್ರಿಜರೇಟರ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು, ರೆಡಿಮೇಡ್ ಬಟ್ಟೆಗಳು, ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ಎಪ್ರಿಲ್ 20ರಿಂದ ಆನ್‌ಲೈನ್ ಸಂಸ್ಥೆಗಳು ಮಾರಾಟ ಮಾಡಬಹುದು ಎಂದು ಸರಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಹಲವು ಇ-ಕಾಮರ್ಸ್ ಸಂಸ್ಥೆಗಳು ಆನ್‌ಲೈನ್ ಮೂಲಕ ಆರ್ಡರ್ ಪಡೆಯಲು ಆರಂಭಿಸಿದ್ದವು.

ಲಾರಿ ಸೇರಿದಂತೆ ಸರಕು ಸಾಗಿಸುವ ಎಲ್ಲಾ ವಾಹನಗಳೂ ಎಪ್ರಿಲ್ 20ರಿಂದ ಸಂಚಾರ ಆರಂಭಿಸಬಹುದು. ಆದರೆ ಇಬ್ಬರು ಚಾಲಕರಿಗೆ, ಒಬ್ಬ ಸಹಾಯಕನಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಚಾಲಕ ಡ್ರೈವಿಂಗ್ ಲೈಸೆನ್ಸ್ ಪಡೆದಿರಬೇಕು. ಹೆದ್ದಾರಿಯಲ್ಲಿರುವ ಗ್ಯಾರೇಜ್‌ಗಳು, ಡಾಬಾಗಳನ್ನು ತೆರೆಯಬಹುದು. ಆದರೆ ಸುರಕ್ಷಿತ ಅಂತರದ ನಿಯಮ ಪಾಲಿಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News