ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಎಲ್ಲ ರೀತಿಯ ಬಲಪ್ರಯೋಗಕ್ಕೆ ಪೊಲೀಸರಿಗೆ ಮುಕ್ತ ಅವಕಾಶ: ಯಡಿಯೂರಪ್ಪ

Update: 2020-04-20 07:15 GMT

ಬೆಂಗಳೂರು, ಎ.20: ಪಾದರಾಯನಪುರದಲ್ಲಿ ಗೂಂಡಾವರ್ತನೆ ತೋರಿದವರ ವಿಷಯದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸರ್ವತಂತ್ರ ಸ್ವತಂತ್ರರು. ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವವರಿಂದ, ಪ್ರಾಣ ರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಎಲ್ಲ ರೀತಿಯ ಬಲಪ್ರಯೋಗ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 ಪಾದರಾಯನಪುರದಲ್ಲಿ ಗೂಂಡಾಗಿರಿ ನಡೆದಿದೆ.‌ ಕಾನೂನು ಸುವ್ಯವಸ್ಥೆ ಕಾಪಾಡಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಈಗಾಗಲೇ 54 ಮಂದಿಯನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ‌ಮತ್ತಷ್ಟು ಕಿಡಿಗೇಡಿಗಳನ್ನು ಬಂಧಿಸಲಾಗುವುದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಕಠಿಣ ‌ಕ್ರಮ‌ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೂಂಡಾಗಿರಿ ಪ್ರವೃತ್ತಿಯನ್ನು ಸರಕಾರ ಎಂದಿಗೂ ಸಹಿಸುವುದಿಲ್ಲ ಎಂದವರು ಎಚ್ಚರಿಸಿದ್ದಾರೆ.

ಪಾದರಾಯನಪುರದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ,  ಸರಕಾರ ಮಾಡುವ ಕೆಲಸಕ್ಕೆ ಝಮೀರ್ ಅಹ್ಮದ್ ಅನುಮತಿ ಯಾಕೆ ಕೇಳಬೇಕು, ಅವರು ಯಾರು? ಅವರ ಹೇಳಿಕೆ ನೋಡಿದರೆ ಇಂತಹ ಗಲಭೆಗೆ‌ ಅವರೇ ಪ್ರಚೋದನೆ ‌ನೀಡುತ್ತಿದ್ದಾರೆಂದು ಭಾವಿಸಬೇಕೆ? ರಾಜ್ಯದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಈ ರೀತಿಯ ಗೂಂಡಾ ಪ್ರವೃತ್ತಿ ಸಹಿಸುವ ಪ್ರಶ್ನೆ ‌ಇಲ್ಲ.‌ ಇದರಲ್ಲಿ ಯಾವ ಧರ್ಮ, ಜಾತಿಯ ಪ್ರಶ್ನೆಯಿಲ್ಲ.‌ ಗೂಂಡಾಗಿರಿ ಮಾಡುವವರ ವಿರುದ್ದ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News