ಟ್ವಿಟರಿಗರ ಛೀಮಾರಿ: ಅರಬ್ ಮಹಿಳೆಯರ ಕುರಿತ ಅಸಭ್ಯ ಟ್ವೀಟ್ ಡಿಲೀಟ್ ಮಾಡಿದ ತೇಜಸ್ವಿ ಸೂರ್ಯ

Update: 2020-04-20 08:21 GMT

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅರಬ್ ಮಹಿಳೆಯರ ಕುರಿತಂತೆ 2015ರಲ್ಲಿ ಮಾಡಿದ್ದ ಅಸಭ್ಯಕರ ಟ್ವೀಟ್ ಒಂದು ವೈರಲ್ ಆಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರೀ ತರಾಟೆಗೊಳಗಾದ ನಂತರ ಈಗ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

“ಶೇ.95ರಷ್ಟು ಅರಬ್ ಮಹಿಳೆಯರು ಕಳೆದ ಕೆಲ ನೂರು ವರ್ಷಗಳಿಂದ ಲೈಂಗಿಕ ಪರಾಕಾಷ್ಠೆಯನ್ನು ತಲುಪಿಲ್ಲ. ಆದರೂ ಪ್ರತಿಯೊಂದು ತಾಯಿ, ಸೆಕ್ಸ್ ಕ್ರಿಯೆಯಿಂದ ಮಕ್ಕಳನ್ನು ಹೆತ್ತಿದ್ದಾಳೆಯೇ ಹೊರತು ಪ್ರೀತಿಯಿಂದಲ್ಲ'' ಎಂದು 2015ರಲ್ಲಿ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

ಇದರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತೇಜಸ್ವಿ ಆ ಟ್ವೀಟ್ ಡಿಲೀಟ್ ಮಾಡಿದ್ದರೂ ಅದರ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ.

ಯುವ ಕಾಂಗ್ರೆಸ್ಸಿನ ಶ್ರೀವತ್ಸ ಬಿ ಟ್ವೀಟ್ ಮಾಡಿ ``ತೇಜಸ್ವಿ ಸೂರ್ಯ, ಇದು ಬಹಳ ಅಗ್ಗದ ಮಾತು. ನೀವು ಬಿಜೆಪಿಯನ್ನು ಹೊಸ ವಿಧದ ರಾಜಕೀಯದತ್ತ ಮುನ್ನಡೆಸುವಿರಿ ಎಂದು ನಾನು ನಿರೀಕ್ಷಿಸುತ್ತೇನೆ'' ಎಂದು ಬರೆದಿದ್ದಾರೆ.

ಮಹಿಳೆಯೊಬ್ಬರು ಕೂಡ ತೇಜಸ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ನಿಮ್ಮನ್ನು ಬೆಳೆಸಿದ ರೀತಿಗೆ ಪರಿತಾಪವಿದೆ. ಮುಂದೊಂದು ದಿನ ನಿಮಗೆ ವಿದೇಶಾಂಗ ಸಚಿವಾಲಯ ದೊರೆತರೂ ಅರಬ್ ದೇಶಗಳಿಗೆ ಹೋಗದಿರಿ. ಅಲ್ಲಿ ನಿಮಗೆ ಸ್ವಾಗತವಿಲ್ಲ. ಇದು ಅಲ್ಲಿ ನೆನಪಿರುತ್ತದೆ'' ಎಂದು ಅವರು ಬರೆದಿದ್ದಾರೆ.

ಮಹಿಳೆಯರಿಗೆ ಲೋಕಸಭೆಯಲ್ಲಿ ಶೇ. 33 ಮೀಸಲಾತಿ ಒದಗಿಸುವುದನ್ನು ವಿರೋಧಿಸಿ ಕೂಡ ಅವರು ಮಾಡಿದ್ದ ಟ್ವೀಟ್ ಹಿಂದೆ ಭಾರೀ ವಿವಾದಕ್ಕೀಡಾಗಿತ್ತು. ``ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ಹೊರತುಪಡಿಸಿ ಮೋದಿ ಸರಕಾದ ಅಜೆಂಡಾ ಸ್ಫೂರ್ತಿದಾಯಕ. ಮಹಿಳಾ ಮೀಸಲಾತಿ ವಾಸ್ತವವಾಗುವ ದಿನದ ಬಗ್ಗೆ ಯೋಚಿಸಿದಾಗ ಭಯವಾಗುತ್ತದೆ'' ಎಂದು ಅವರು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News