×
Ad

10,899.23 ಕೋಟಿ ರೂ. ಮೊತ್ತದ ಬಿಬಿಎಂಪಿ ಬಜೆಟ್ ಮಂಡನೆ

Update: 2020-04-20 18:39 IST

ಬೆಂಗಳೂರು, ಎ.20: ಲಾಕ್‍ಡೌನ್ ನಡುವೆಯೇ ಸೋಮವಾರ ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಈ ವರ್ಷದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಬೀದಿಬದಿ ವ್ಯಾಪಾರಿಗಳು, ನಿರಾಶ್ರಿತರಿಗೆ ತಂಗುದಾಣ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ, ಪ್ರತಿಭಾವಂತ ಕ್ರೀಡಾಪಟುಗಳ ಉತ್ತೇಜನ, ಕನ್ನಡ ಪತ್ರಿಕೆಗಳ ಮಾರಾಟಕ್ಕೆ ಪ್ರತಿ ವಾರ್ಡ್‍ನಲ್ಲಿ ಮಳಿಗೆ ನಿರ್ಮಾಣ, ವೈಯಕ್ತಿಕ ಮನೆ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲು 361.34 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಪ್ರಕಟಿಸಿದೆ.

ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು, ಮೇಯರ್ ಗೌತಮ್‍ಕುಮಾರ್, ಉಪ ಮೇಯರ್ ರಾಮಮೋಹನರಾಜು ಹಾಗೂ ಕಂದಾಯ ಸಚಿವ ಆರ್. ಅಶೋಕ್, ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ತೇಜಸ್ವಿ ಸೂರ್ಯ, ವಿಪಕ್ಷ ನಾಯಕ ಅಬ್ದುಲ್‍ವಾಜೀದ್, ಜೆಡಿಎಸ್‍ನ ನೇತ್ರಾ ನಾರಾಯಣ್ ಉಪಸ್ಥಿತಿಯಲ್ಲಿ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಿದರು.

ಪ್ರತಿ ವರ್ಷ ಪಾಲಿಕೆಗೆ ಆದಾಯದ ರೂಪದಲ್ಲಿ ಬರುತ್ತಿರುವುದು ಆಸ್ತಿ ತೆರಿಗೆ ಮಾತ್ರ. ಉಳಿದಂತೆ ಕೆಲವು ತೆರಿಗೆ ಬಂದರೂ ಅದರಿಂದ ಪಾಲಿಕೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತಿಲ್ಲ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನಿಟ್ಟಿನಲ್ಲಿ 'ಬಿ' ಖಾತೆ ಹೊಂದಿದವರಿಗೆ 'ಎ' ಖಾತೆ ನೀಡುವ ಮೂಲಕ ಶುಲ್ಕದ ರೂಪದಲ್ಲಿ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವ ಉದ್ದೇಶವನ್ನು ಪ್ರಕಟಿಸಲಾಗಿದೆ. ಇದಕ್ಕೆ ಸರಕಾರದ ಅನುಮತಿಯನ್ನು ಕೋರಲು ತೀರ್ಮಾನಿಸಲಾಗಿದೆ

ಸಮರ್ಪಕ ಆಸ್ತಿ ತೆರಿಗೆ ಸಂಗ್ರಹಣೆ ಮಾಡಲು ನಗರ ವ್ಯಾಪ್ತಿಯಲ್ಲಿನ ಉಪ ನೋಂದಣಾಧಿಕಾರಿಗಳ ಕಚೇರಿಯ ಋಣಭಾರ ಪತ್ರದಲ್ಲಿ ತೆರಿಗೆ ಬಾಕಿ ವಿವರವನ್ನು ನಮೂದನೆ ಮಾಡುವ ಉದ್ದೇಶದ ಜೊತೆಗೆ ಹಲವಾರು ವರ್ಷಗಳಿಂದ ಬಾಕಿ ಇರುವ ಸುಧಾರಣಾ ಶುಲ್ಕವನ್ನು ಸಂಗ್ರಹಿಸಿದಲ್ಲಿ 300 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ, ಟ್ರೇಡ್ ಲೈಸೆನ್ಸ್ ವ್ಯವಸ್ಥೆ ಸರಳೀಕರಣ, ನಗರದ ಹೊಟೇಲ್‍ಗಳನ್ನು ವರ್ಗೀಕರಿಸಿ ತೆರಿಗೆ ಸಂಗ್ರಹದ ಗುರಿಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಟ್ಟು 4338.99 ಕೋಟಿ ರೂ. ಅನುದಾನದ ಆಧಾರವನ್ನು ಇಟ್ಟುಕೊಂಡು ಹಲವಾರು ಯೋಜನೆಗಳನ್ನು ಪ್ರಕಟಿಸಿದೆ.

ಪಾಲಿಕೆ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ದಿ. ಅನಂತಕುಮಾರ್ ಅವರ ಹೆಸರಿನಲ್ಲಿ ಲ್ಯಾಪ್‍ಟಾಪ್ ವಿತರಣೆ, ಸ್ಮಾರ್ಟ್ ಶಿಕ್ಷಣಕ್ಕೆ ಒತ್ತು, ಜ್ಞಾನದೀಪ ಯೋಜನೆಗೆ ಅನುದಾನ, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಹೊಸ ವಲಯಗಳಲ್ಲಿ ಶಾಲೆಗಳ ನಿರ್ಮಾಣ, ಪಾಲಿಕೆ ಶಾಲೆಯ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್‍ಗಳಲ್ಲಿ ಸಂಚಾರಕ್ಕೆ ಉಚಿತ ಬಸ್ ಪಾಸ್ ವಿತರಣೆ, ಪಾಲಿಕೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಉಚಿತ ಡಯಾಲಿಸಿಸ್ ಸೇವೆ, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ಪೌರಕಾರ್ಮಿಕರಿಗೆ ವಸತಿ, ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುದಾನ, ನಗರದಲ್ಲಿ ಹೊಸದಾಗಿ ರುದ್ರಭೂಮಿಗಳ ನಿರ್ಮಾಣ, ವಿಶೇಷ ಚೇತನರಿಗೆ ಹಲವಾರು ಯೋಜನೆಗಳನ್ನು ಪ್ರಕಟಿಸಿ ಅದಕ್ಕೆ 30 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ನಗರ ಪ್ರವೇಶಿಸುವ ಎಂಟು ಮಾರ್ಗಗಳಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತಕಮಾನು ನಿರ್ಮಾಣ ಮಾಡಲು ಅನುದಾನ ಮೀಸಲಿರಿಸಲಾಗಿದೆ. ದೋಭಿಘಾಟ್‍ಗಳಲ್ಲಿ ವಾಷಿಂಗ್ ಮೆಷಿನ್ ಒದಗಿಸಲು ಅನುದಾನ, ಹೊಸ ವಲಯದ 110 ಹಳ್ಳಿ ಪ್ರದೇಶಗಳಲ್ಲಿ ಹೊಸದಾಗಿ ವಿದ್ಯುತ್ ಫಿಟಿಂಗ್‍ಗಳನ್ನು ಅಳವಡಿಸಲು ಅನುದಾನ, ಅಪಾಯಕಾರಿ ಸ್ಥಳಗಳಲ್ಲಿ ಮಳೆ ನೀರುಕಾಲುವೆಗಳಿಗೆ ತಂತಿಬೇಲಿ ಅಳವಡಿಕೆಗೆ 10 ಕೋಟಿ ರೂ. ಅನುದಾನ, ವಾಹನ ನಿಲುಗಡೆಗಾಗಿ ಸರ್.ಎಂ.ವಿಶ್ವೇಶ್ವರಯ್ಯ ಹೆಸರಿನಲ್ಲಿ ಪಾಲಿಕೆಯ ಆಯ್ದ ಕಡೆಗಳಲ್ಲಿ ಬಹುವಾಹನ ನಿಲ್ದಾಣ ನಿರ್ಮಾಣ, ವೃತ್ತ ಮತ್ತು ಜಂಕ್ಷನ್‍ಗಳ ಉನ್ನತೀಕರಣಕ್ಕೆ 40 ಕೋಟಿ, ರಸ್ತೆ ಮೇಲ್ಸೇತುವೆ, ಕೆಳಸೇತುವೆ ದುರಸ್ತಿಗೆ 40 ಕೋಟಿ ರೂ., ಆರ್ಟಿರಿಯಲ್ ಮತ್ತು ಸಬ್‍ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗೆ 105 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು...
►ಕೊರೋನ ವೈರಸ್ ನಿಯಂತ್ರಣಕ್ಕೆ 49.50 ಕೋಟಿ ರೂ. ಅನುದಾನ.
►ಶುಭ್ರ ಬೆಂಗಳೂರು ಯೋಜನೆಗೆ 999 ಕೋಟಿ ರೂ. ಮೀಸಲು.
►ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ 8,344 ಕೋಟಿ ರೂ. ಯೋಜನೆ ಅನುಷ್ಠಾನ.
►ರಸ್ತೆಗಳ ಅಭಿವೃದ್ದಿಗೆ 105 ಕೋಟಿ ರೂ. ಅನುದಾನ.
►ಸರ್ ಎಂ. ವಿಶ್ವೇಶ್ವರಯ್ಯ ಹೆಸರಿನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್.
►ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ ಪೌರನಿಗಮ ಸ್ಥಾಪನೆಗೆ ಕಾಯ್ದೆ.
►ನಗರದಲ್ಲಿ ಕೆರೆಗಳ ನಿರ್ವಹಣೆಗೆ 25 ಕೋಟಿ ರೂ. ಮೀಸಲು.
►ನಗರದಲ್ಲಿ ಸಸಿಗಳನ್ನು ನೆಡುವ ಉದ್ದೇಶಕ್ಕೆ ಅರಣ್ಯ ಇಲಾಖೆಗೆ 73 ಕೋಟಿ  ರೂ.
►ವಾರ್ಡ್ ಮಟ್ಟದ ಕಾಮಗಾರಿಗಳಿಗೆ 415.50 ಕೋಟಿ ರೂ. ಮೀಸಲು.
►ಕುಡಿವ ನೀರಿಗೆ ಹೊಸ ವಾರ್ಡ್‍ಗೆ 35 ಲಕ್ಷ ರೂ. ಹಳೆ ವಾರ್ಡ್‍ಗೆ 20 ಲಕ್ಷ ರೂ.
►ಕೆಂಪೇಗೌಡರ ಹೆಸರಿನಲ್ಲಿ ನಾಲ್ಕು ದಿಕ್ಕಿನಲ್ಲಿ ಸ್ವಾಗತಕಮಾನು ನಿರ್ಮಾಣ.
►ನಗರದ ಉದ್ಯಾನವನಗಳ ಅಭಿವೃದ್ಧಿಗೆ 54 ಕೋಟಿ ರೂ. ಮೀಸಲು
►ಘನ್ಯತ್ಯಾಜ್ಯ ನಿರ್ವಹಣೆಗಾಗಿ 757 ಕೋಟಿ ರೂ. ನಿಗದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News