ಪಾದರಾಯನಪುರ: 67 ಮಂದಿಯ ಬಂಧನ, ಮುಂದುವರೆದ ತನಿಖೆ
ಬೆಂಗಳೂರು, ಎ.20: ಪಾದರಾಯನಪುರದಲ್ಲಿ ಕೊರೋನ ಸೋಂಕು ಶಂಕಿತರನ್ನು ಕ್ವಾರಂಟೈನ್ ಮಾಡುವ ವೇಳೆ ಕೆಲ ಕಿಡಿಗೇಡಿಗಳು ಗಲಾಟೆ ನಡೆಸಿ ಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ 67 ಜನರನ್ನು ಬಂಧಿಸಿರುವ ಜೆಜೆ ನಗರ ಠಾಣಾ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿ 67 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಕೃತ್ಯದಲ್ಲಿ 150 ರಿಂದ 200 ಮಂದಿ ಆರೋಪಿಗಳು ಭಾಗಿಯಾಗಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಜಾಗ್ರತ ಕ್ರಮವಾಗಿ ಪಾದರಾಯನಪುರ ವ್ಯಾಪ್ತಿಯಲ್ಲಿ 10 ಕೆಎಸ್‍ಆರ್‍ಪಿ ತುಕಡಿ ಮತ್ತು 220 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮೊಕ್ಕಾಂ ಹೂಡಿದ್ದಾರೆ.
ತನಿಖೆ ಸಿಸಿಬಿಗೆ
ಪಾದರಾಯನಪುರ ಗಲಾಟೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ತನಿಖೆಗೆ ಸೂಚನೆ ನೀಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು 12 ಇನ್ಸ್‍ಪೆಕ್ಟರ್‍ಗಳು 3 ಎಸಿಪಿಗಳಿಂದ ತನಿಖೆ ನಡೆಯಲಿದೆ.
ಐದು ಎಫ್ ಐಆರ್
ಪಿಎಸ್ಸೈ ರಮನ್ ಗೌಡ, ವೈದ್ಯನೋರ್ವ ಸೇರಿದಂತೆ ಐವರು ನೀಡಿರುವ ದೂರಿನನ್ವಯ ಆರೋಪಿಗಳ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐದು ಎಫ್‍ಐಆರ್ ದಾಖಲಾಗಿದೆ.