ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ: ಬಸವರಾಜ ಬೊಮ್ಮಾಯಿ

Update: 2020-04-20 15:28 GMT

ಬೆಂಗಳೂರು, ಎ.20: ಪಾದರಾಯನಪುರದಲ್ಲಿ ನಡೆದಿರುವ ಘಟನೆ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ಈ ಘಟನೆಗೆ ಕಾರಣವಾಗಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿ ಹಲ್ಲೆ ನಡೆಸುವ ಪ್ರಯತ್ನ ಮಾಡಲಾಗಿದೆ. ಘಟನೆ ನಡೆದ ಕೆಲವೆ ಗಂಟೆಯಲ್ಲಿ 54 ಜನರನ್ನು ಬಂಧಿಸಲಾಗಿದೆ. ಮತ್ತಷ್ಟು ಕಿಡಿಗೇಡಿಗಳನ್ನು ಶೀಘ್ರವೆ ಬಂಧಿಸಲಾಗುವುದು ಎಂದರು.

ಬಂಧಿತರ ವಿರುದ್ಧ ಎನ್‍ಡಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಸೆಕೆಂಡರಿ ಕಾಂಟ್ಯಾಕ್ಟ್ ಇರುವ ಜನ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‍ಗೆ ಸಹಕಾರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ತಡೆಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಜನತೆಯು ಸರಕಾರದ ಜೊತೆ ಸಹಕರಿಸಬೇಕು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಮಸ್ಯೆ ಮಾಡಿದರೆ ಕಠೋರ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪಾದರಾಯನಪುರದಲ್ಲಿ ಕೆಎಫ್‍ಡಿಯ ಕೆಲವು ಪುಡಿ ನಾಯಕರು ಗಲಭೆಗೆ ಪ್ರಚೋದನೆ ನೀಡಿದ್ದು, ಇಂತಹವರಿಗೆ ಪೊಲೀಸ್ ಆ್ಯಕ್ಷನ್ ಏನು ಎಂಬುದನ್ನು ತೋರಿಸುತ್ತೇವೆ. ಪುಂಡಾಟಿಕೆ ಮಾಡುವವರನ್ನು ಮುಲಾಜಿಲ್ಲದೆ ಅಡಗಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಮಝಾನ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ವಕ್ಫ್ ಬೋರ್ಡ್ ಕೂಡ ನಿದೇರ್ಶನ ನೀಡಿದೆ. ಅದನ್ನು ಪಾಲಿಸಬೇಕು. ಈ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಕೊರೋನ ಸೋಂಕಿತ ಮಹಿಳೆಯ ಶವಸಂಸ್ಕಾರದಲ್ಲಿ ಶಾಸಕ ಝಮೀರ್ ಅಹ್ಮದ್ ಖಾನ್ ಪಾಲ್ಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಶವ ಸಂಸ್ಕಾರದಲ್ಲಿ 20ಕ್ಕಿಂತ ಹೆಚ್ಚು ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಬಹುದಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯೂ ಅವರ ಮೇಲಿದೆ ಎಂದರು.

ಕೇರಳ ಹಾಗೂ ಉತ್ತರಪ್ರದೇಶದ ಮಾದರಿಯಲ್ಲಿ ಸುಗ್ರೀವಾಜ್ಞೆ ಅಂತಿಮ ಆಗುತ್ತಿದೆ. ಕಾನೂನು ಇಲಾಖೆ ಜೊತೆ ಚರ್ಚೆ ಮಾಡಿ ಆದೇಶ ಹೊರಡಿಸುತ್ತೇವೆ. ಹೆಚ್ಚು ಸೆಕ್ಷನ್‍ಗಳನ್ನು ಹಾಕುವುದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸುತ್ತೇವೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News