ಕೊರೋನ ವಿರುದ್ಧ ಹೋರಾಟಕ್ಕೆ ವೈದ್ಯಕೀಯ ಸಿಬ್ಬಂದಿಗಳಿಗೆ ಸಹಕರಿಸಿ: ಶಾಸಕ ಝಮೀರ್ ಅಹ್ಮದ್

Update: 2020-04-20 16:47 GMT

ಬೆಂಗಳೂರು, ಎ.20: ಪಾದರಾಯನಪುರ ವಾರ್ಡ್‍ನಲ್ಲಿ ಸಂಭವಿಸಿದ ಅಹಿತಕರ ಘಟನೆ ನನ್ನ ಕ್ಷೇತ್ರದ ಬೇರೆಡೆ ಮರುಕಳಿಸದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದು. ಇಂತಹ ಘಟನೆಗಳು ಬರೀ ನನ್ನ ಕ್ಷೇತ್ರವಲ್ಲ ಎಲ್ಲಿಯೂ ನಡೆಯಬಾರದು. ಜನರು ಸಂಯಮದಿಂದ ವರ್ತಿಸಿ, ವೈದ್ಯಕೀಯ ಸಿಬ್ಬಂದಿಗಳಿಗೆ ಸಹಕರಿಸಿ, ಎಲ್ಲರೂ ಒಗ್ಗಟ್ಟಾಗಿ ಕೊರೋನ ರೋಗವನ್ನು ತೊಲಗಿಸೋಣ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಕರೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು, ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಯನ್ನು ಸಮರ್ಥಿಸುವ ಪ್ರಶ್ನೆಯೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬ ನನ್ನ ನಿರ್ಧಾರ ಅಚಲ. ರಾತ್ರಿ ವೇಳೆ ಕ್ವಾರಂಟೈನ್‍ಗೆ ಜನರನ್ನು ಕರೆದುಕೊಂಡು ಹೋಗಲು ಬಂದಾಗ ಸಹಜವಾಗಿಯೆ ಜನ ಗಾಬರಿಗೊಂಡಿದ್ದಾರೆ. ಇದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ನಿನ್ನೆಯ ಘಟನೆಯಿಂದ ನನಗೂ ಬೇಸರವಾಗಿದೆ ಎಂದರು.

ಪಾದರಾಯನಪುರದ ನಿವಾಸಿಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದವರು, ಬಡವರು ಮತ್ತು ಅಶಿಕ್ಷಿತರು. ಅವರು ಕೊರೋನ ಪರೀಕ್ಷೆಗೆ ಆಸ್ಪತ್ರೆಗೆ ಬರುವುದಿಲ್ಲ. ಸ್ಥಳದಲ್ಲಿಯೆ ತಪಾಸಣೆ ಮಾಡಿ ಎಂದು ಹಠ ಮಾಡಿದ್ದಾರೆ. ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟು ಕೊರೋನ ತಪಾಸಣೆಗೆ ಒಳಪಡಿಸಬೇಕಿತ್ತು ಎಂದು ಅವರು ಹೇಳಿದರು.

ತಪಾಸಣೆಗೆ ರಾತ್ರಿ ಹೋಗುವುದು ಬೇಡ, ಹಗಲು ಹೊತ್ತಿನಲ್ಲಿ ಹೋಗೋಣ ಎಂದು ಬಿಬಿಎಂಪಿ ಆಯುಕ್ತರಿಗೆ ಶನಿವಾರ ಸಂಜೆ ತಿಳಿಸಿ, ರವಿವಾರ ಇಡೀ ದಿನ ಅವರಿಗಾಗಿ ಕಾದಿದ್ದೆ. ಸಂಜೆ 6.30ರ ವೇಳೆಗೆ ನನ್ನ ಗಮನಕ್ಕೆ ತರದೆ ನೇರವಾಗಿ ಬಿಬಿಎಂಪಿಯವರು ಅಲ್ಲಿಗೆ ಹೋಗಿದ್ದರಿಂದ ಸ್ವಲ್ಪ ಎಡವಟ್ಟಾಗಿದೆ ಎಂದು ಝಮಿರ್ ಅಹ್ಮದ್ ಖಾನ್ ತಿಳಿಸಿದರು.

ಈ ಘಟನೆಗೆ ತಪ್ಪು ಮಾಹಿತಿ ಕೂಡಾ ಒಂದು ಕಾರಣ. ಬಿಬಿಎಂಪಿ ಸಿಬ್ಬಂದಿ ರಾತ್ರಿ ಹೋಗಿದ್ದ ಕಾರಣ ಜನ ಗೊಂದಲಕ್ಕೀಡಾಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಇನ್ನೂ ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸಬಹುದಿತ್ತು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮಾನವೀಯತೆ ಮುಖ್ಯ: ಕೊರೋನ ಸೋಂಕಿಗೆ ಬಲಿಯಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ನನ್ನಿಂದ ದೂರ ಇರುವಂತೆ ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರಂತೆ. ಈ ರೀತಿ ಯಾರಾದರೂ ಅವರ ಕ್ಷೇತ್ರದಲ್ಲಿ ಮೃತಪಟ್ಟು, ಅಂತ್ಯಕ್ರಿಯೆಗೆ ಯಾರೂ ದಿಕ್ಕಿಲ್ಲ ಎಂದಾದರೆ ನಾನು ಅಲ್ಲಿಗೂ ಹೋಗುತ್ತೇನೆ. ನನಗೆ ನನ್ನ ಜೀವ ಮುಖ್ಯ ಅಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕು. ನನಗೆ ಮಾನವೀಯತೆ ಮುಖ್ಯ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದು ನಿಜ. ಅವರ ಕುಟುಂಬದವರು ಆಸ್ಪತ್ರೆಯಲ್ಲಿರಲಿಲ್ಲ. ಆಸ್ಪತ್ರೆಯ ಬಿಲ್ ಪಾವತಿಗೆ ಹಣ ಇಲ್ಲದೆ ಸಂಬಂಧಿಕರು ಪರದಾಡುತ್ತಿದ್ದರು. ಅದರಿಂದಾಗಿ ನಾನು ಹೋಗಬೇಕಾಯಿತು. ಇದೊಂದು ಮಾನವೀಯ ಕೆಲಸವೆಂದು ಮಾಡಿದ್ದೇನೆ ಎಂದು ಅವರು ಹೇಳಿದರು.

'ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ'
ಪಾದರಾಯನಪುರದಲ್ಲಿ ನಡೆದ ಘಟನೆಗೆ ಕಾರಣಕರ್ತರಾದವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಯಾರೊಬ್ಬರೂ ರಾಜಕೀಯ ಮಾಡಬಾರದು.
-ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News