×
Ad

"ಏಕಾಏಕಿ ಕರೆದೊಯ್ದರೆ, ಮನೆಗೆ ದಿಕ್ಕು ಯಾರು?"

Update: 2020-04-20 22:21 IST

ಬೆಂಗಳೂರು, ಎ.20: ನಿಮ್ಮ ಪ್ರದೇಶದಲ್ಲಿ ಕೊರೋನ ಸೋಂಕಿತರು ಹೆಚ್ಚಾಗಿದ್ದಾರೆ. ನಿಮ್ಮ ಬೀದಿಯಲ್ಲಿನ ನಿವಾಸಿ ಆಗಿರುವ ಮಹಿಳೆ ಮೃತಪಟ್ಟಿದ್ದಾರೆ. ನೀವು ಆಕೆಯೊಂದಿಗೆ ಸಂಪರ್ಕ ಇದ್ದೀರಿ. ನೀವು ಈ ಕೂಡಲೇ ನಮ್ಮ ಜೊತೆ ತೆರಳಬೇಕು. ಹೀಗೆ, ಹೇಳುತ್ತಿದ್ದಂತೆಯೇ, ನಾವು ಗಾಬರಿಗೊಂಡೆವು.
ನಮಗೆ ಏನು ಮಾಡಬೇಕು ಎನ್ನುವುದು ಗೊತ್ತಾಗಿಲ್ಲ. ಏಕೆಂದರೆ, ನಾವು ಆಯಾ ದಿನಕ್ಕೆ ದುಡಿದು ತಿನ್ನುವ ಶ್ರಮಿಕರು. ನಮ್ಮನ್ನು ಏಕಾಏಕಿ ಕರೆದುಕೊಂಡು ಹೋದರೆ, ನಮ್ಮ ಮನೆಗೆ ದಿಕ್ಕು ಯಾರು? ಹೀಗೆ, ಹತ್ತಾರು ಸಮಸ್ಯೆಗಳನ್ನು ಮುಂದಿಟ್ಟಿದ್ದು ಪಾದರಾಯನಪುರದಲ್ಲಿ ಕ್ವಾರಂಟೈನ್ ಆಗಲು ಸಿದ್ಧವಾಗಿದ್ದ ಕೆಲ ಮಂದಿ.

ಈಗಾಗಲೇ ಇಪ್ಪತ್ತು ದಿನಗಳಿಂದ ನಾವು ಮನೆಯಲ್ಲಿಯೇ ಇದ್ದೇವೆ. ಕಳೆದ ವಾರವಷ್ಟೇ ಇಲ್ಲಿನ ಕೆಲಮಂದಿಯನ್ನು ಕ್ವಾರಂಟೈನ್‍ನಲ್ಲಿಡಲಾಗಿತ್ತು. ತದನಂತರ, ಮಹಿಳೆ ಮೃತಪಟ್ಟರು. ಇದೀಗ ನಮ್ಮನ್ನು ನೀವು ಎಲ್ಲರೂ ಬರಬೇಕು ಎಂದು ರಾತ್ರೋರಾತ್ರಿ ಕರೆದರೆ, ನಮಗೆ ಭಯ ಆಗುವುದಿಲ್ಲವೇ. ಅಲ್ಲದೆ, ಸಂಸಾರದ ಜವಾಬ್ದಾರಿಯೇ ನಮ್ಮ ಮೇಲಿರುವಾಗ ನಮ್ಮನ್ನು ನೀವು ಕರೆದುಕೊಂಡು ಹೋದರೆ, ಕುಟುಂಬಸ್ಥರನ್ನು ನೋಡುವುದಾದರೂ ಯಾರು? ಈ ಬಗ್ಗೆ ಏಕೆ ಯಾವುದೇ ಭರವಸೆ ನೀಡಿಲ್ಲ ಎಂದು ಅರಫತ್ ನಗರದ ನಿವಾಸಿಯೋರ್ವರು ಪ್ರಶ್ನಿಸಿದರು.

'ಮಾಹಿತಿ ನೀಡಿಲ್ಲ': ರವಿವಾರ ದಿನಪೂರ್ತಿ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ಮಾಹಿತಿಯೇ ಇರಲಿಲ್ಲ. ಕೆಲವರು ಕೆಜಿ ರಸ್ತೆಯ ಸಿಟಿ ಮಾರ್ಕೆಟ್ ಬಳಿಕ ಹೊಟೇಲ್ ಎಂದು ಹೇಳಿದರೆ, ಇನ್ನು ಕೆಲವರು ಹಜ್ ಭವನ, ರಾಜೀವ್ ಗಾಂಧಿ ಆಸ್ಪತ್ರೆ ಎನ್ನುತ್ತಿದ್ದರು. ಆದರೆ, ಯಾರಿಗೂ ನಿಖರವಾದ ಮಾಹಿತಿಯೇ ಇರಲಿಲ್ಲ. ಇನ್ನು ರಾತ್ರಿ ವೇಳೆ, ಏಕಾಏಕಿ ಬರಬೇಕೆಂದು ಹೇಳಿದರೆ, ನಾವು ಗಾಬರಿ ಆದೆವು ಎಂದು ಹೆಸರು ಹೇಳಲು ಇಚ್ಛಿಸದ ಪಾದರಾಯನಪುರದ 11ನೇ ಕ್ರಾಸ್ ನ ನಿವಾಸಿ ನುಡಿದರು.

'ಹಲ್ಲೆ ನಡೆಸಿಲ್ಲ': ಘಟನೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲ. ಇನ್ನು, ಕೆಲ ಯುವಕರು ಉದ್ದೇಶಪೂರ್ವಕವಾಗಿ ವಸ್ತುಗಳಿಗೆ ಹಾನಿ ಮಾಡಿದ್ದಾರೆಯೇ ಹೊರತು ಇದರ ಹಿಂದೆ ಯಾರ ಷಡ್ಯಂತ್ರವು ಇಲ್ಲ. ಹೀಗೆಲ್ಲಾ ಆಗಲಿದೆ ಎನ್ನುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎನ್ನುತ್ತಾರೆ ಅಲ್ಲಿನ ಕೆಲ ನಿವಾಸಿಗಳು.

'ವಿಡಿಯೊ ಮಾಡಿದ್ದು, ಮುಸ್ಲಿಮರು'!
ಪಾದರಾಯನಪುರ ಗಲಾಟೆಯನ್ನು ಸ್ಥಳದಲ್ಲಿದ್ದ ಅನೇಕರು ಖಂಡಿಸಿದರು. ಅಲ್ಲದೆ, ಕೆಲ ಯುವಕರ ಕೃತ್ಯವನ್ನು ಅಲ್ಲಿನ ಮುಸ್ಲಿಮರೇ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಆದರೆ, ಕೆಲ ಮಾಧ್ಯಮಗಳಲ್ಲಿ ಇದಕ್ಕೆ ಕೋಮು ಬಣ್ಣ ನೀಡಲಾಗುತ್ತಿದೆ.
-ನವಾಝ್, ಪಾದರಾಯನಪುರ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News