×
Ad

ಕನ್ನಡ ಸುದ್ದಿವಾಹಿನಿಗಳು ಜವಾಬ್ದಾರಿಯಿಂದ ವರ್ತಿಸಲಿ: ಪಾಪ್ಯುಲರ್ ಫ್ರಂಟ್

Update: 2020-04-21 15:17 IST

ಬೆಂಗಳೂರು: ಕೊರೋನ ವೈರಸ್ ವಿರುದ್ಧ ಎಲ್ಲೆಡೆ ಒಗ್ಗಟ್ಟಿನ ಪ್ರತಿಬಂಧಕ ಕ್ರಮಗಳು ಕಂಡು ಬರುತ್ತಿದ್ದರೂ ರಾಜ್ಯದಲ್ಲಿ ಕೆಲವು ಸುದ್ದಿ ಮಾಧ್ಯಮಗಳು ಪೂರ್ವಾಗ್ರಹಪೀಡಿತವಾಗಿ ಸುದ್ದಿ ಬಿತ್ತರಿಸಿ ಕೊರೋನ ನಿಯಂತ್ರಣ ಕ್ರಮಗಳಿಗೆ ಹಿನ್ನಡೆ ಉಂಟು ಮಾಡುತ್ತಿವೆ. ಈ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ವರ್ತಿಸಬೇಕಾಗಿದ್ದ ಮಾಧ್ಯಮಗಳು ಸಂಪೂರ್ಣವಾಗಿ ರೋಗ ಭೀತಿಯನ್ನು ಕೋಮುಧ್ರುವೀಕರಣಕ್ಕೆ ಬಳಸುತ್ತಿರುವುದು ಅಕ್ಷಮ್ಯ ಮತ್ತು ಖಂಡನಾರ್ಹ. ಸರಕಾರವು ಈ ಕೂಡಲೇ ಇಂತಹ ಮಾಧ್ಯಮಗಳ ಪ್ರಸಾರವನ್ನು ಕೋವಿಡ್-19 ಪರಿಸ್ಥಿತಿಯು ಹತೋಟಿಗೆ ಬರುವವರೆಗೆ ತಡೆಹಿಡಿಯಬೇಕು. ಕೋಮುಧ್ರುವೀಕರಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಒತ್ತಾಯಿಸಿದ್ದಾರೆ.

ಬೀದರ್ ನಲ್ಲಿ ಒಂದು ನಿರ್ದಿಷ್ಠ ಸಮುದಾಯಕ್ಕೆ ಸೇರಿದ ಇಬ್ಬರು  ಕೊರೋನ ಪೀಡಿತರಾಗಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿದ ಕನ್ನಡದ ಪ್ರಮುಖ ಸುದ್ದಿ ಚಾನೆಲ್ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಆರಂಭದಿಂದಲೇ ಕೊರೋನವನ್ನು ಕೋಮು ಆಧಾರಿತವಾಗಿ ಚಿತ್ರಿಸಿ ಜನರಲ್ಲಿ ಅಪನಂಬಿಕೆಯನ್ನು ಬೆಳೆಸಿವೆ. ಇತ್ತೀಚೆಗೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆಯಲ್ಲೂ ಒಂದು ಸಮುದಾಯವನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ್ದು ಮಾತ್ರವಲ್ಲದೇ ಇಡೀ ದಿನ ಇದೇ ಘಟನೆಗೆ ಸಂಬಂಧಿಸಿ ಚರ್ಚಿಸುತ್ತಾ ತಮ್ಮ ಟಿವಿ ಚರ್ಚೆಯಲ್ಲೊಂದರ  ವಿಷಯವನ್ನೇ "ಭಾರತ ಮತ್ತು ಅವರು" ಎಂದಿಟ್ಟು ಚರ್ಚೆಯಲ್ಲಿ ಒಂದು ಸಮುದಾಯವನ್ನು ಗುರಿಪಡಿಸುವ ರೀತಿಯ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ದ್ವೇಷಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುತ್ತಾರೆ. ನಿರಂತರ ಇಂತಹ ವರದಿಯ ಪರಿಣಾಮವಾಗಿ ಹಲವು ಕಡೆ ಹಲ್ಲೆ, ಮೈಸೂರು ಮತ್ತು ಮಂಡ್ಯದಲ್ಲಿ ಮುಸ್ಲಿಮ್ ಮೊಹಲ್ಲಾಗಳಿಗೆ ಬಹಿಷ್ಕಾರ, ಚಿಕಿತ್ಸೆ ನಿರಾಕರಣೆ, ಮುಸ್ಲಿಮ್ ಸಾಮಾಜಿಕ ಕಾರ್ಯಕರ್ತರು ಸಮಾಜಸೇವೆ ನಡೆಸದಂತೆಯೂ ತಡೆಯೊಡ್ಡಿದ ಪ್ರಕರಣಗಳು ನಡೆದಿವೆ ಎಂದು ಹೇಳಿದರು.

ಮಾಧ್ಯಮದ ವರದಿಯ ಆಧಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವರು ನಿರಂತರ ಮುಸ್ಲಿಮರ ವಿರುದ್ಧದ ದ್ವೇಷಪೂರಿತ ಸಂದೇಶಗಳನ್ನು ಹರಿಯಬಿಟ್ಟ ಕಾರಣದಿಂದ ರಾಜ್ಯಾಧ್ಯಂತ ವಿವಿಧ ಠಾಣೆಗಳಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತದೆ. ಮಾಧ್ಯಮಗಳ ಇಸ್ಲಾಮಾಫೋಬಿಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಆರೋಪದಲ್ಲಿ ವಿದೇಶದಲ್ಲೂ ಹಲವು ಅನಿವಾಸಿ ಭಾರತೀಯರು ಕೆಲಸದಿಂದ ವಜಾಗೊಂಡು ಜೈಲು ಸೇರಿದ್ದಾರೆ. ಇಂತಹ ಎಲ್ಲಾ ಘಟನೆಗಳು ಮಾಧ್ಯಮವು ಪ್ರಸಾರ ಮಾಡಿದ ಪೂರ್ವಾಗ್ರಹಪೀಡಿತ ವರದಿಗಳಾಗಿವೆ. ಈ ಎಲ್ಲ ಪರಿಣಾಮಗಳಿಗೆ ಮಾಧ್ಯಮವು ನೇರ ಹೊಣೆಯಾಗಿದ್ದು, ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಮಾತ್ರವೇ ನಾಡಿನಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ಪಾಪ್ಯುಲರ್ ಫ್ರಂಟ್ ತಿಳಿಸುತ್ತದೆ. 

ಮಾಧ್ಯಮಗಳು ಸಾಮಾಜಿಕ ಕಳಕಳಿಯೊಂದಿಗೆ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ ರಾಜ್ಯಗಳಲ್ಲಿ ಕೊರೋನವು ಬಹುತೇಕ ನಿಯಂತ್ರಣಕ್ಕೆ ಯಶಸ್ಸು ಸಾಧಿಸಿರುವುದನ್ನು ಕಾಣಬಹುದು. ರಾಜ್ಯದಲ್ಲಿ ಕನ್ನಡ ನ್ಯೂಸ್ ಚಾನೆಲ್ ಗಳು ಮಾತ್ರ ಬೇಜವಾಬ್ದಾರಿಯಿಂದ ವರ್ತಿಸಿ ನಕಾರಾತ್ಮಕ ಪರಿಣಾಮವನ್ನು ಬೀರಿವೆ ಎಂದು ಯಾಸಿರ್ ಹಸನ್ ಆರೋಪಿಸಿದ್ದಾರೆ. 

ಜನರು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುವ ಸುಳ್ಳುಸುದ್ದಿ, ವದಂತಿಗಳಿಗೆ ಕಿವಿಗೊಡದೆ ಆಡಳಿತ ವ್ಯವಸ್ಥೆ ಮತ್ತು ಆರೋಗ್ಯ ಇಲಾಖೆಯ ಅಧಿಕೃತರು ನೀಡುವ ಮಾಹಿತಿಯನ್ನು ಮಾತ್ರವೇ ಅವಲಂಬಿಸಬೇಕಾಗಿ ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News