"ಔಷಧಿಗೆಂದು ಹೋದ ಮಗ ವಾಪಸ್ಸು ಬಂದಿಲ್ಲ": ತಾಯಿಯ ಅಳಲು
ಬೆಂಗಳೂರು, ಎ.21: ಔಷಧಿ ತೆಗೆದುಕೊಂಡು ಬರುವ ಸಲುವಾಗಿ ನನ್ನ ಮಗ ಹೊರ ಹೋಗಿದ್ದ. ಆದರೆ, ಇದೀಗ ಅವನನ್ನು ಬಂಧಿಸಿದ್ದೇವೆ ಎಂದು ಹೇಳುತ್ತೀರಿ. ನಮ್ಮ ಕುಟುಂಬಕ್ಕೆ ಆತನೇ ಆಧಾರ, ನಾನೇನು ಮಾಡಲಿ ಎಂದು ತಾಯಿಯೊಬ್ಬಾಕೆ ಪತ್ರಕರ್ತರ ಕಡೆ ಪ್ರಶ್ನಿಸಿ ಕಣ್ಣೀರು ಹಾಕಿದ ದೃಶ್ಯ ಕಂಡಿತು.
ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನ ಸೈನಿಕರ ಮೇಲೆ ಹಲ್ಲೆ ಆರೋಪ ಸಂಬಂಧ ಬಂಧಿತರ ಪೈಕಿ ಯುವಕನೋರ್ವನ ತಾಯಿ ಜೆ.ಜೆ.ಆರ್.ನಗರ ಪೊಲೀಸ್ ಠಾಣೆ ಎದುರು ಎದೆ ಬಡಿದುಕೊಂಡು ಕಣ್ಣೀರು ಹಾಕಿದ ದೃಶ್ಯ ಮನಕುಲಕುವಂತಿತ್ತು.
ಎ.19ರಂದು ನನ್ನ ಮಗ ಔಷಧಿ ತೆಗೆದುಕೊಂಡ ಬರುತ್ತೇನೆ ಎಂದು ಆಸ್ಪತ್ರೆಯ ಚೀಟಿಗಳನ್ನು ಹಿಡಿದು ಮನೆಯ ಹೊರಗಡೆ ಹೋದ. ಬಳಿಕ ವಾಪಸ್ಸು ಬರಲೇ ಇಲ್ಲ. ಈ ಬಗ್ಗೆ ಆತಂಕಗೊಂಡು ಸ್ಥಳೀಯರನ್ನು ಪ್ರಶ್ನಿಸಿದರೆ, ಪೊಲೀಸರು ಎಳೆದುಕೊಂಡು ಹೋದರು ಎಂದು ಉತ್ತರಿಸಿದರು. ಇದು ಕೇಳುತ್ತಿದ್ದಂತೆಯೇ, ಎದೆ ಬಡಿತ ಹೆಚ್ಚಾಯಿತು. ನಂತರ, ಸಂಬಂಧಿಕರೊಂದಿಗೆ ಜೆ.ಜೆ.ಆರ್.ನಗರ ಪೊಲೀಸ್ ಠಾಣೆಗೆ ಬಂದೆವು. ಅಲ್ಲಿನ ಕೆಲ ಪೊಲೀಸ್ ಪೇದೆಗಳು ಯಾವುದು ಸಣ್ಣ ಗಲಾಟೆ ಮಾಹಿತಿ ಬೇಕಾಗಿದೆ. ಆನಂತರ ಮನೆಗೆ ಕಳುಹಿಸುತ್ತೇವೆ ಎಂದರು. ಆದರೆ, ಹೊತ್ತು ಕಳೆಯುತ್ತಿದ್ದಂತೆಯೇ, ಮಗನನ್ನು ಬಿಟ್ಟು ಕೊಡುವ ಲಕ್ಷಣ ಕಾಣಲೇ ಇಲ್ಲ ಎಂದು ಅವರು ಘಟನೆ ಕುರಿತು ವಿವರಿಸಿದರು.