ಬೆಂಗಳೂರು: ನಾಯಿಗಳು ಎಳೆದಾಡುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿದ ಆಟೋ ಚಾಲಕ

Update: 2020-04-22 12:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.22: ಬಟ್ಟೆಯಲ್ಲಿ ಸುತ್ತಿ ಎಸೆದಿದ್ದ ನವಜಾತ ಶಿಶುವನ್ನು ನಾಯಿಗಳು ಎಳೆದಾಡುತ್ತಿದ್ದುದನ್ನು ಗಮನಿಸಿದ ಆಟೋ ಚಾಲಕನೊಬ್ಬ ಶಿಶುವನ್ನು ರಕ್ಷಿಸಿದ್ದು, ಎಲ್ಲೆಡೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಯಶವಂತಪುರ ತ್ರಿವೇಣಿ ರಸ್ತೆಯಲ್ಲಿರುವ ಬಾಪು ಕಾಲೇಜಿನ ಬಳಿ ಬೆಳಗಿನ ಜಾವ 4.30ರ ಸುಮಾರಿನಲ್ಲಿ ಆಟೋದಲ್ಲಿ ತೆರಳುತ್ತಿದ್ದ ಸುಬೇದಾರ್ ಪಾಳ್ಯದ ನಿವಾಸಿ ನಾಗರಾಜ್‍ಗೆ ಮಗು ಅಳುವ ಶಬ್ದ ಕೇಳಿಬಂದಿದೆ. ಹತ್ತಿರ ಹೋಗಿ ನೋಡಿದಾಗ ಬಟ್ಟೆಯಲ್ಲಿ ಸುತ್ತಿದ್ದ ಮಗುವನ್ನು ಬೀದಿ ನಾಯಿಗಳು ಎಳೆದಾಡುತ್ತಿರುವುದು ಕಂಡುಬಂದಿದೆ.

ಕೂಡಲೇ ನಾಯಿಗಳನ್ನು ಓಡಿಸಿ, ಬಟ್ಟೆಯಲ್ಲಿ ಕಟ್ಟಿರುವುದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಕೂಡಲೇ ನಾಗರಾಜ್ ಶಿಶುವನ್ನು ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಶಿಶು ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ನಾಗರಾಜ್ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಮಗುವನ್ನು ಎಸೆದು ಹೋದವರು ಯಾರೆಂದು ಪತ್ತೆಗೆ ಮುಂದಾಗಿದ್ದಾರೆ.

ಆಟೋ ಚಾಲಕನ ಕಾರ್ಯಕ್ಕೆ ಅಭಿನಂದನೆಗಳು: ಮಗು ಪತ್ತೆಯಾದ ಸ್ಥಳದ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಆರೋಪಿಗಳು ಮಗುವನ್ನು ಎಸೆದು ಹೋಗಿರುವ ದೃಶ್ಯ ಸೆರೆಯಾಗಿದೆ. ಆದರೆ, ಅವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನಾಗರಾಜ್ ಮಗುವನ್ನು ರಕ್ಷಿಸದೇ ಇದ್ದಿದ್ದರೆ ನಾಯಿಗಳಿಂದ ಮಗುವಿಗೆ ಅಪಾಯವಾಗುದ ಸಾಧ್ಯತೆ ಇತ್ತು. ಇದೀಗ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ, ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News