ಪಾದರಾಯನಪುರ ಗಲಾಟೆಯಲ್ಲಿ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿಲ್ಲ: ಚರ್ಚೆಗೆ ಗ್ರಾಸವಾದ ಬಿಬಿಎಂಪಿ ಆಯುಕ್ತರ ಹೇಳಿಕೆ

Update: 2020-04-22 15:09 GMT
ಅನಿಲ್ ಕುಮಾರ್

ಬೆಂಗಳೂರು, ಎ.22: ಪಾದರಾಯನಪುರ ಗಲಾಟೆ ಸಂಬಂಧ ಆರೋಗ್ಯ ಸಿಬ್ಬಂದಿ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ಹೇಳಿಕೆ ನೀಡಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಘಟನೆ ನಡೆದ ದಿನದಂದು ಕನ್ನಡ ಸುದ್ದಿ ವಾಹಿನಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು, ಪಾದರಾಯನಪುರದಲ್ಲಿ ಬಿಬಿಎಂಪಿ ಅಥವಾ ಯಾವುದೇ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ(ಬಿಬಿಎಂಪಿ) ಅಧಿಕಾರಿಗಳು ದ್ವಿತೀಯ ಸಂಪರ್ಕ ಹೊಂದಿದ್ದ 22 ಜನರನ್ನು ಒಂದು ಬಾರಿ ಹೋಟೆಲ್‍ಗೆ ಸ್ಥಳಾಂತರ ಮಾಡಿದ್ದರು, ಎರಡನೇ ಬಾರಿ ಬಾಕಿ ಉಳಿದಿದ್ದವರನ್ನು ಸ್ಥಳಾಂತರಿಸಲು ತೆರಳಿದ್ದಾಗ, ಇಷ್ಟೊತ್ತಿನಲ್ಲಿ ಕರೆದುಕೊಂಡು ಹೋಗುವುದು ಬೇಡ ಎಂದು ಸ್ಥಳೀಯರು ತಡೆದಿದ್ದಾರೆ. ಇದಾದ ನಂತರ ವೈದ್ಯಾಧಿಕಾರಿಗಳು ನನಗೆ ಕರೆಮಾಡಿ ತಿಳಿಸಿದರು. ಆಗ ನಾನು, ಇಷ್ಟೊತ್ತಿನಲ್ಲಿ ನೀವು ಏಕೆ ಹೋಗುತ್ತೀರಾ, ನೀವು ಹೋಗಿರುವುದು ತಪ್ಪು, ನಾಳೆ ಬೆಳಗ್ಗೆ ಹೋಗಿ ಎಂದು ಹೇಳಿ ವೈದ್ಯಕೀಯ ಸಿಬ್ಬಂದಿಯನ್ನು ವಾಪಾಸು ಕರೆಸಿದೆ. ಅಧಿಕಾರಿಗಳೆಲ್ಲ ವಾಪಾಸು ಬಂದ ನಂತರ ಕೆಲವು ಯುವಕರು ಅಲ್ಲಿ ಹಾಕಿದ್ದ ಬ್ಯಾರಿಕೇಡ್ ಅನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಯುಕ್ತರ ಪ್ರಾಥಮಿಕ ಮಾಹಿತಿ: ಬಿಟಿವಿಗೆ ಆಯುಕ್ತರು ನೀಡಿದ ಹೇಳಿಕೆ ಕುರಿತು ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಚಾನೆಲ್ ನ ನಿರೂಪಕ ರಂಜಿತ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಆರೋಗ್ಯ ಸಿಬ್ಬಂದಿ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ಹೇಳಿರುವುದು ನಿಜ. ಇದು ಅವರಿಗೆ ದೊರೆತ ಪ್ರಾಥಮಿಕ ಮಾಹಿತಿ ಇರಬಹುದು ಎಂದರು.

ಆಯುಕ್ತರು ಹೇಳುವುದೇನು ?

ಪಾದರಾಯನಪುರ ಗಲಾಟೆ ಬಗ್ಗೆ ಟಿವಿ ಚಾನೆಲ್ ಗೆ ನೀಡಿದ ಹೇಳಿಕೆ ಕುರಿತು ಆಯುಕ್ತರನ್ನು 'ವಾರ್ತಾಭಾರತಿ'ಯು ಪ್ರಶ್ನಿಸಿದಾಗ ಅವರು, "ವೈದ್ಯಕೀಯ ಸಿಬ್ಬಂದಿಗೆ ಗಾಯಗಳೇ ಆಗಿಲ್ಲ ಎಂದು ಹೇಳಿಲ್ಲ. ಅಲ್ಲದೆ, ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಪಾದರಾಯನಪುರ ಗಲಾಟೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ" ಎಂದು ತಿಳಿಸಿದರು.

ಆಯುಕ್ತರ ಮಾತನ್ನು ಉಲ್ಲೇಖಿಸಿದ್ದ ಝಮೀರ್ ?
"ಪಾದರಾಯನಪುರಕ್ಕೆ ಇಷ್ಟೊತ್ತಿನಲ್ಲಿ ನೀವು ಏಕೆ ಹೋಗುತ್ತೀರಾ, ನೀವು ಹೋಗಿರುವುದು ತಪ್ಪು, ನಾಳೆ ಬೆಳಗ್ಗೆ ಹೋಗಿ ಎಂದು ಹೇಳಿ ವೈದ್ಯಕೀಯ ಸಿಬ್ಬಂದಿಯನ್ನು ವಾಪಾಸು ಕರೆಸಿದ್ದೆ" ಎಂದು ಸ್ವತಃ ಬಿ ಟಿವಿ ಯೊಂದಿಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.
ಇದನ್ನೇ ಉಲ್ಲೇಖಿಸಿದ್ದ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಸಹ ರಾತ್ರಿ ವೇಳೆ ಪಾದರಾಯನಪುರಕ್ಕೆ ಹೋಗಿದ್ದೇ ತಪ್ಪು ಎಂದಿದ್ದರು ಎನ್ನಲಾಗಿದೆ. ಆದರೆ, ಅವರ ಈ ಹೇಳಿಕೆ ವಿವಾದ ಹುಟ್ಟು ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News