ವಕೀಲರಿಗೆ ತುರ್ತು 50,000 ಬಿಡುಗಡೆ ಕೋರಿ ಪಿಐಎಲ್: ವಕೀಲರ ಪರಿಷತ್‍ಗೆ ಹೈಕೋರ್ಟ್ ನೋಟಿಸ್

Update: 2020-04-22 18:27 GMT

ಬೆಂಗಳೂರು, ಎ.22: ಕೋವಿಡ್-19 ಪರಿಣಾಮ ಕೋರ್ಟ್ ಕಲಾಪಗಳು ಬಹುತೇಕ ಸ್ಥಗಿತಗೊಂಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿರಿಯ ವಕೀಲರಿಗೆ ಕೂಡಲೇ 50 ಸಾವಿರ ಎಕ್ಸ್‍ಗ್ರೇಷಿಯಾ ಮೊತ್ತ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಭಾರತೀಯ ವಕೀಲರ ಪರಿಷತ್, ರಾಜ್ಯ ವಕೀಲರ ಪರಿಷತ್ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಬೆಂಗಳೂರು ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠವು, ಭಾರತೀಯ ವಕೀಲರ ಪರಿಷತ್, ರಾಜ್ಯ ವಕೀಲರ ಪರಿಷತ್, ಭಾರತೀಯ ವಕೀಲರ ಕಲ್ಯಾಣ ನಿಧಿಗಳ ಸಮಿತಿ ಹಾಗೂ ಕರ್ನಾಟಕ ವಕೀಲರ ಕಲ್ಯಾಣ ನಿಧಿ ಟ್ರಸ್ಟಿ ಸಮಿತಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯ ವಕೀಲರ ಪರಿಷತ್‍ನಿಂದ ಸನ್ನದು ಪಡೆದಿರುವ ವಕೀಲರು ಕಾಲಕಾಲಕ್ಕೆ ಕಲ್ಯಾಣ ನಿಧಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಇದರ ಕೋಟ್ಯಂತರ ಮೊತ್ತವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಕಾಯಂ ಠೇವಣಿ ಇರಿಸಲಾಗಿದೆ. ಈ ಮೊತ್ತದಲ್ಲಿ 50 ಸಾವಿರವನ್ನು ಯಾರಿಗೆ ಅಗತ್ಯವಿದೆಯೊ ಅಂತಹ ವಕೀಲರಿಗೆ ಎಕ್ಸ್‍ಗ್ರೇಷಿಯಾ ಮೊತ್ತ ಎಂದು ಪರಿಗಣಿಸಿ ತಕ್ಷಣವೇ ಬಿಡುಗಡೆ ಮಾಡಲು ರಾಜ್ಯ ವಕೀಲರ ಪರಿಷತ್‍ಗೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದಾರೆ.

ಈಗ ನೀಡಬಹುದಾದ 50 ಸಾವಿರ ಮೊತ್ತವನ್ನು ಕಲ್ಯಾಣ ನಿಧಿಯ ಬಿಡುಗಡೆ ಸಮಯದಲ್ಲಿ ಕಡಿತ ಮಾಡಿಕೊಳ್ಳಬಹುದು. ಹೀಗಾಗಿ, ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1961 ಕಲಂ 168ರ ಅಡಿಯಲ್ಲಿ ಈ ಹಣ ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿದರು.

ಈ ನಿಟ್ಟಿನಲ್ಲಿ ಈಗಾಗಲೇ ಪಶ್ಚಿಮ ಬಂಗಾಳ, ಹೊಸದಿಲ್ಲಿ ಹಾಗೂ ತಮಿಳುನಾಡು ರಾಜ್ಯಗಳ ವಕೀಲರ ಪರಿಷತ್ ಕೈಗೊಂಡಿರುವ ಕ್ರಮಗಳನ್ನು ಗಮನಿಸಬಹುದಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News