​ಐದು ರಾಜ್ಯಗಳಲ್ಲಿ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ನಬ್ ಗೋಸ್ವಾಮಿ ಮೊರೆ

Update: 2020-04-24 05:11 GMT

ಹೊಸದಿಲ್ಲಿ: ದ್ವೇಷಭಾಷಣ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಾನಹಾನಿ ಆರೋಪದಲ್ಲಿ ಐದು ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ವಿಧಿಸಬೇಕು ಎಂದು ಕೋರಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಲಿದೆ.

ಮಹಾರಾಷ್ಟ್ರ, ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಿಸಿರುವ ಎಫ್‌ಐಆರ್ ಸಂಬಂಧ ಯಾವುದೇ ಕಾನೂನು ಕ್ರಮ ಮುಂದುವರಿಸಬಾರದು ಎಂದು ಕೋರಿದ್ದಾರೆ. ಸಂವಿಧಾನದ 19 (1) (ಎ) ವಿಧಿ ಅನ್ವಯ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ ಇದು ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ತಮ್ಮ ಪ್ರೈಮ್‌ಟೈಮ್ ಶೋನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ಗೋಸ್ವಾಮಿ ವಿರುದ್ಧ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮಧ್ಯರಾತ್ರಿ 12.15ಕ್ಕೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ನಮ್ಮ ಮೇಲೆ ದಾಳಿ ಮಾಡಿದ್ದಾಗಿ ಗೋಸ್ವಾಮಿ ಹಾಗೂ ಅವರ ಪತ್ನಿ ಠಾಣೆಗೆ ತೆರಳಿ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News