ಜುಲೈಗಿಂತ ಮೊದಲು ಟ್ವೆಂಟಿ-20 ವಿಶ್ವಕಪ್ ಕುರಿತು ಯಾವುದೇ ನಿರ್ಧಾರವಾಗದು: ಕಿವೀಸ್ ಕ್ರಿಕೆಟ್ ಮುಖ್ಯಸ್ಥ

Update: 2020-04-24 08:14 GMT

 ಕ್ರೈಸ್ಟ್‌ಚರ್ಚ್: ಕೋವಿಡ್-19 ಪಿಡುಗಿನ ಕಾರಣಕ್ಕೆ ಜುಲೈಗಿಂತ ಮೊದಲು ಟ್ವೆಂಟಿ-20 ವಿಶ್ವಕಪ್‌ನ್ನು ಮುಂದೂಡುವ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್‌ನ ಸಿಇಒ ಡೇವಿಡ್ ವೈಟ್ ಗುರುವಾರ ತಿಳಿಸಿದ್ದಾರೆ.

ಮಾರಣಾಂತಿಕ ಕೊರೋನ ವೈರಸ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ನಿಗದಿಯಾಗಿರುವ ಟ್ವೆಂಟಿ-20 ವಿಶ್ವಕಪ್ ನಡೆಯುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

‘‘ಆಕಸ್ಮಿಕ ಯೋಜನೆ ನಡೆಯುತ್ತಿದೆ ಹಾಗೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಒಂದು ವೇಳೆ ನಿರ್ಧಾರ ಕೈಗೊಂಡರೆ ಅದನ್ನು ಜುಲೈನಲ್ಲಿ ಕೈಗೊಳ್ಳಬಹುದು’’ಎಂದು ಕಾನ್ಫರೆನ್ಸ್ ಕರೆಯಲ್ಲಿ ವೈಟ್ ಸುದ್ದಿಗಾರರಿಗೆ ತಿಳಿಸಿದರು.

ಐಸಿಸಿಯ ಕಾರ್ಯನಿರ್ವಾಹಕ ಸಮಿತಿ(ಸಿಇಸಿ)ಮುಂಬರುವ ದಿನಗಳಲ್ಲಿ ಸಭೆ ಸೇರಲಿದ್ದು, ಆರೋಗ್ಯ ಬಿಕ್ಕಟ್ಟಿನ ಪರಿಣಾಮಗಳ ಕುರಿತು ಚರ್ಚಿಸಲಿದೆ ಹಾಗೂ ಟ್ವೆಂಟಿ-20 ವಿಶ್ವಕಪ್ ಸೇರಿದಂತೆ ಎಲ್ಲ ಐಸಿಸಿ ಜಾಗತಿಕ ಸ್ಪರ್ಧೆಗಳ ಬಗ್ಗೆ ಆಕಸ್ಮಿಕ ಯೋಜನೆ ರೂಪಿಸುವ ಕುರಿತು ಕಾನ್ಫರೆನ್ಸ್ ಕರೆ ನಡೆಸಲಿದೆ.

‘‘ಜನರು ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ವಿಶ್ವಕಪ್‌ಗಳ ಕುರಿತು ಚರ್ಚಿಸಲಾಗುತ್ತದೆ. ಆದರೆ, ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರುವ ಬಗ್ಗೆ ಖಚಿತತೆ ನನಗಿದೆ. ಕ್ರಿಕೆಟ್ ಆಸ್ಟ್ರೇಲಿಯವು ಸರಕಾರದ ಅಧಿಕಾರಿಗಳೊಂದಿಗೆ ಬಹಳ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಅದು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ವಿಶ್ವಕಪ್‌ನ್ನು ನಿಗದಿಯಂತೆ ನಡೆಸಲು ಯೋಜನೆ ಹಾಕಿಕೊಂಡಿದೆೆ’’ ಎಂದು ವೈಟ್ ತಿಳಿಸಿದ್ದಾರೆ.

  2021ರ ಫೆಬ್ರವರಿಯಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವಕಪ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೈಟ್,‘‘ಮುಂದೂಡಿಕೆಯ ಬಗ್ಗೆ ಖಚಿತವಾಗಿ ಚರ್ಚಿಸಲಾಗುವುದಿಲ್ಲ. ನ್ಯೂಝಿಲ್ಯಾಂಡ್ ಪಾಲಿಗೆ ಮಹಿಳೆಯರ ವಿಶ್ವಕಪ್ ಅತ್ಯಂತ ಮುಖ್ಯ ಆದರೆ ಮುಂದೂಡಿಕೆಯು ನಮ್ಮ ಕಾರ್ಯಸೂಚಿಯಲಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News