ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಚಾಲನೆ

Update: 2020-04-25 18:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.25: ಕೋವಿಡ್ ಸೋಂಕಿತರಿಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರುವ ಪ್ಲಾಸ್ಮಾ ಚಿಕಿತ್ಸೆಗೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಇದಕ್ಕೆ ಚಾಲನೆ ನೀಡಿದರು. ಗಂಭೀರ ಪರಿಸ್ಥಿತಿಯಲ್ಲಿರುವ ಕೊರೋನ ಸೋಂಕಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿ ಇರುವುದು ಕಂಡು ಬಂದಿದೆ. ಇದೀಗ ರಾಜ್ಯದಲ್ಲಿ ಕೂಡ ಈ ಪ್ರಕ್ರಿಯೆ ಲಭ್ಯವಾದಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರ್ನಾಟಕ ರಾಜ್ಯಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಪ್ಲಾಸ್ಮಾ ಚಿಕಿತ್ಸೆಯಿಂದ ಸೋಂಕಿತರು ಗುಣಮುಖರಾದರೆ ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು.

ಇಂದಿನಿಂದ ಇದರ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು, ವೆಂಟಿಲೇಟರ್ ನಲ್ಲಿರುವ ಪೀಡಿತರಿಗೆ ಈ ಚಿಕಿತ್ಸೆ ನೀಡಲಾಗುವುದು. ಕೋವಿಡ್‍ನಿಂದ ಗುಣಮುಖರಾಗಿರುವ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸಹಕರಿಸಲು ಮುಂದೆ ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಈ ಚಿಕಿತ್ಸೆಗೆ ಗುಣಮುಖರಾಗಿರುವ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಬಂದು ಸಹಕಾರ ನೀಡಬೇಕಾಗಿದೆ. ಗುಣಮುಖರಾಗಿರುವ ವ್ಯಕ್ತಿಗಳು 2 ವಾರದ ಅಂತರದಲ್ಲಿ ಕನಿಷ್ಟ ಇಬ್ಬರು ಅಥವಾ ಮೂವರಿಗೆ ಈ ನೆರವು ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಸಚಿವ ಸುಧಾಕರ್ ಹೇಳಿದರು

ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ.ಸಿ.ಆರ್.ಜಯಂತಿ, ಬೆಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕಾಲಜಿಯ ಡಾ.ವಿಶಾಲ್ ರಾವ್ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News