ಮೇ 3ರ ಬಳಿಕವೂ ಲಾಕ್‌ಡೌನ್ ವಿಸ್ತರಣೆಗೆ ಈ ಐದು ರಾಜ್ಯಗಳ ಒಲವು

Update: 2020-04-26 04:21 GMT

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಮೇ 16ರವರೆಗೆ ವಿಸ್ತರಣೆಯಾಗಲಿದೆ ಎಂದು ದೆಹಲಿ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಂಗಾಳ, ಪಂಜಾಬ್ ಮತ್ತು ಒಡಿಶಾ ಕೂಡಾ ತಮ್ಮ ರಾಜ್ಯಗಳಲ್ಲಿ ಮೇ 3ರ ಬಳಿಕವೂ ಲಾಕ್‌ಡೌನ್ ವಿಸ್ತರಿಸಲು ಒಲವು ವ್ಯಕ್ತಪಡಿಸಿವೆ.

ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ಲಾಕ್‌ಡೌನ್ ಸಂಬಂಧ ಕೇಂದ್ರದ ನಿರ್ದೇಶನವನ್ನು ಪಾಲಿಸುವುದಾಗಿ ತಿಳಿಸಿವೆ. ಆದರೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಜತೆ ವೀಡಿಯೊ ಕಾನ್ಫರೆನ್ಸ್ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಅಸ್ಸಾಂ, ಕೇರಳ ಮತ್ತು ಬಿಹಾರ ಪ್ರಕಟಿಸಿವೆ. ತೆಲಂಗಾಣ ಮೇ 7ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದು, ಇದು ಮುಕ್ತಾಯವಾಗುವ ಎರಡು ದಿನಗಳ ಮುನ್ನ, ಲಾಕ್‌ಡೌನ್ ವಿಸ್ತರಿಸುವ ಸಂಬಂಧ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದ ಒಟ್ಟು ಕೊರೋನ ಪ್ರಕರಣಗಳ ಪೈಕಿ ಶೇಕಡ 92ರಷ್ಟು ಪ್ರಕರಣಗಳು ಇರುವ ಮುಂಬೈ ಹಾಗೂ ಪುಣೆ ನಗರದಲ್ಲಿ ಮೇ 18ರವರೆಗೆ ಲಾಕ್‌ಡೌನ್ ವಿಸ್ತರಿಸುವ ಸುಳಿವನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ನೀಡಿದ್ದಾರೆ. ಸೋಮವಾರ ಪ್ರಧಾನಿಯವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ. ಬಹುಶಃ ಮೇ 3ರ ಬಳಿಕ ಮತ್ತೆ 15 ದಿನ ಕಾಲ ವಿಸ್ತರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿರೋಧ ಪಕ್ಷಗಳ ಆಡಳಿತ ಇರುವ ಬಂಗಾಳ, ಒಡಿಶಾ ಮತ್ತು ಪಂಜಾಬ್, ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಒಲವು ವ್ಯಕ್ತಪಡಿಸಿವೆ. ಮಧ್ಯಪ್ರದೇಶದಲ್ಲಿ ಇಂಧೋರ್, ಭೋಪಾಲ್, ಉಜ್ಜಯಿನಿ ಮತ್ತು ಖರಗಾಂವ್ ಜಿಲ್ಲೆಗಳಲ್ಲಿ ಮೇ 3ಕ್ಕೆ ಲಾಕ್‌ಡೌನ್ ಮುಗಿಯುವುದಿಲ್ಲ ಎಂಬ ಸುಳಿವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News