ಬಿಜೆಪಿಯವರ ಜನವಿರೋಧಿ ಹೇಳಿಕೆಗಳ ಬಗ್ಗೆಯೂ ವಿಶ್ಲೇಷಣೆ ಮಾಡಿ: ಮಾಧ್ಯಮಗಳಿಗೆ ಡಿಕೆಶಿ ಸಲಹೆ

Update: 2020-04-26 14:58 GMT

ಬೆಂಗಳೂರು, ಎ.26: ಮಾಧ್ಯಮಗಳು ಆಡಳಿತ ಪಕ್ಷಕ್ಕೆ ಒಂದು ರೀತಿ, ವಿರೋಧ ಪಕ್ಷಕ್ಕೆ ಮತ್ತೊಂದು ರೀತಿಯ ಸುದ್ದಿ ವಿಶ್ಲೇಷಣೆ ಮಾಡುವ ಮೂಲಕ ತಾರತಮ್ಯ ಮಾಡಬಾರದು. ಯಾರೇ ತಪ್ಪು ಮಾಡಿದರು ಪಕ್ಷಭೇದ ಮರೆತು ಸಮಾನವಾಗಿ ಸುದ್ದಿ ಪ್ರಸಾರವಾಗಲಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಎಲ್ಲ ಪಕ್ಷಗಳ ಹೇಳಿಕೆಗಳನ್ನು ಸರಿ ಸಮಾನವಾಗಿ ವಿಶ್ಲೇಷಣೆ ಮಾಡಬೇಕು. ಕಾಂಗ್ರೆಸ್, ಜೆಡಿಎಸ್ ತಪ್ಪು ಮಾಡಿದ್ದರೆ ಅದನ್ನು ಪ್ರಶ್ನೆ ಮಾಡಿ. ಅದೇ ರೀತಿ ಬಿಜೆಪಿಯವರು ನೀಡುವ ಜನವಿರೋಧಿ ಹೇಳಿಕೆಗಳ ಬಗ್ಗೆಯೂ ವಿಶ್ಲೇಷಣೆ ಮಾಡಿ ಎಂದು ತಿಳಿಸಿದರು.

ಮಂಡ್ಯದಲ್ಲಿ, ಪಾದರಾಯನಪುರದಲ್ಲಿ ಯಾರಾದರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಎಲ್ಲರೂ ಕಾನೂನಿಗೆ ಬದ್ದರಾಗಬೇಕು. ಆದರೆ, ಆಡಳಿತ ಪಕ್ಷದವರಿಗೆ ಒಂದು ರೀತಿ, ವಿರೋಧ ಪಕ್ಷದವರಿಗೆ ಮತ್ತೊಂದು ರೀತಿಯ ಕಾನೂನು ಯಾಕೆಂದು ಅವರು ಪ್ರಶ್ನಿಸಿದರು.

ಶಾಸಕ ಭರತ್ ಶೆಟ್ಟಿ ಕೊರೋನ ಸೋಂಕಿತ ಮೃತ ಮಹಿಳೆಯ ಶವಸಂಸ್ಕಾರಕ್ಕೆ ಅವಕಾಶ ನೀಡದೆ, ರಾತ್ರಿಯಲ್ಲ ಶವವನ್ನು ಸುತ್ತಾಡಿಸಿದರು. ರೇಣುಕಾಚಾರ್ಯ, ಅನಂತ್‍ಕುಮಾರ್ ಹೆಗಡೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೋಮು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ. ಇವರಿಗೆಲ್ಲ ಕಾನೂನಾತ್ಮಕ ಶಿಕ್ಷೆ ಯಾವಾಗ ಎಂದು ಅವರು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News